ಚಿಕ್ಕಮಗಳೂರು: ಟ್ರಾಫಿಕ್ ಸಮಸ್ಯೆ, ಮನೆ ಕಳವು ಪ್ರಕರಣದ ಬಗ್ಗೆ ಪೊಲೀಸರು ಗಮನ ಹರಿಸುತ್ತಿಲ್ಲ. ವಾಹನ ಕಳವಾಗಿದ್ದು ಇನ್ನೂ ಸಿಕ್ಕಿಲ್ಲ. ಪುಂಡರ ಹಾವಳಿ ಹೆಚ್ಚಾಗಿದೆ. ಪ್ರಕರಣ ಇತ್ಯರ್ಥವಾಗಿಲ್ಲ…
ಎಸ್ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಜನರು ದೂರವಾಣಿ ಕರೆ ಮಾಡಿ ಹೇಳಿಕೊಂಡ ಸಮಸ್ಯೆಗಳಿವು. ಎಲ್ಲರ ಸಮಸ್ಯೆ ಆಲಿಸಿದ ಎಸ್ಪಿ, ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ, ಎಂಜಿ ರಸ್ತೆ, ಐಜಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಶಾಲಾ ಕಾಲೇಜುಗಳ ಬಳಿ ಪುಂಡರ ಹಾವಳಿ ಹೆಚ್ಚಾಗಿದೆ. ವ್ಹೀಲಿಂಗ್ ಹೆಚ್ಚಾಗುತ್ತಿದೆ ಎಂದು ಜನ ದೂರು ಹೇಳಿದರು.
ಲಕ್ಕವಳ್ಳಿ ದೇವರಾಜು ಮಾತನಾಡಿ, ಮನೆಯಲ್ಲಿ ಕಳವಾಗಿ ಹಲವು ದಿನಗಳು ಕಳೆದಿದ್ದು, ದೂರು ನೀಡಲಾಗಿದೆ. ಆದರೆ ಪೊಲೀಸರು ಗಮನಹರಿಸುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಕಳ್ಳರ ಶೋಧ ನಡೆಯುತ್ತಿದೆ. ವಿವಿಧ ಪ್ರಕರಣಗಳಲ್ಲಿ ಸಿಕ್ಕವರಿಂದ ಮಾಲನ್ನು ವಶಪಡಿಸಿಕೊಳ್ಳಲಾಗುತ್ತಿದೆ. ನಿಮ್ಮ ಪ್ರಕರಣದ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದ ಇಂದಿರಾಗಾಂಧಿ ರಸ್ತೆ ಮಹಾತ್ಮ ಗಾಂಧಿ ರಸ್ತೆ ಪಾದಚಾರಿಗಳ ಮಾರ್ಗವನ್ನು ಅನೇಕ ಅಂಗಡಿ ಮಾಲೀಕರು ಒತ್ತುವರಿ ಮಾಡಿದ್ದಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ದುರಸ್ತಿಪಡಿಸಲು ನಗರಸಭೆಗೆ ಸೂಚನೆ ನೀಡಬೇಕೆಂದು ನಗರದ ಚೌಡಪ್ಪ ಎಂಬುವರು ಮನವಿ ಮಾಡಿದರು.
ಸ್ಪಂದಿಸಿದ ಎಸ್ಪಿ, ನಗರದ ಅಂಗಡಿಗಳ ವರ್ತಕರ ಸಭೆ ಕರೆದು ವಾಹನ ನಿಲುಗಡೆ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಇನ್ಯಾರಾದರೂ ಸಂಚಾರಿ ನಿಯಮ ಉಲ್ಲಂಘಸಿದರೆ ಯಾವುದೇ ಮುಲಾಜಿಗೆ ಒಳಗಾಗದೆ ದಂಡ ವಿಧಿಸಿ ಕ್ರಮಕೈಗೊಳ್ಳಲಾಗುವುದು. ವಾರಾಂತ್ಯದಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಥವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಜೀಪ್ ಮಾಲೀಕರು ದಾಖಲೆಗಳನ್ನು ಹೊಂದಿರಬೇಕು. ಕೆಲವರ ಬಳಿ ದಾಖಲೆ ಇಲ್ಲದ ದೂರುಗಳು ಬಂದಿವೆ. ಅಂಥ ವಾಹನಗಳ ಸಂಚಾರ ರದ್ದುಗೊಳಿಸಲಾಗುವುದು ಎಂದರು.
ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವವರಿಗೆ ಪೊಲೀಸರು ಹೆಚ್ಚಿನ ದಂಡ ವಿಧಿಸುತ್ತಿದ್ದಾರೆ ಎಂದು ನಗರದ ಸಂದೀಪ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಉಮಾ ಪ್ರಶಾಂತ್, ಕೆಲ ದಿನಗಳಿಂದ ದಂಡ ವಿಧಿಸುತ್ತಿಲ್ಲ. ತಪಾಸಣೆ ಮಾಡಿ ಎಚ್ಚರಿಕೆ ಕೊಡಲಾಗುತ್ತಿದೆ. ಜನ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಆಗ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯ ಎಂದರು.
ರಾತ್ರಿ ವೇಳೆ ಗೂರ್ಖಾಗಳು ರಸ್ತೆಯಲ್ಲಿ ಓಡಾಡುತ್ತ ಕಾವಲು ಕಾಯುತ್ತಿದ್ದೇವೆ ಎಂದು ಹೇಳಿ ಹಣ ವಸೂಲಿಗೆ ಮನೆಗಳ ಬಳಿಗೆ ಬರುತ್ತಾರೆ. ಇದಕ್ಕೆ ಅನುಮತಿಯಿದೆಯೇ ಎಂದು ಬಸವನಹಳ್ಳಿ ಕುಮಾರ ಪ್ರಶ್ನಿಸಿದರು. ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಅವರು ಹಣ ವಸೂಲಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ವಾರಾಂತ್ಯದಲ್ಲಿ ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಆಗಂತುಕರು ಆಗಮಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿಲ್ಲ. ರಾತ್ರಿ ವೇಳೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ನಗರದ ಜಯರಾಮ ಎಂಬುವರು ಎಸ್ಪಿ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಉಮಾ ಪ್ರಶಾಂತ್, ಗಂಭೀರವಾಗಿ ಪರಿಗಣಿಸಿದ್ದು ಪ್ರವಾಸಿಗರು ತಂಗುವ ರೆಸಾರ್ಟ್, ಹೋಟೇಲ್, ಹೋಂ ಸ್ಟೇಗಳಲ್ಲಿ ದಾಖಲೆ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದರು.