ಶಿವಮೊಗ್ಗ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಟಾನದಲ್ಲಿ ವಿಳಂಬವಾಗುತ್ತಿದೆ. ಅರಣ್ಯ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೂಚನೆ ನೀಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ 206, 766ಸಿ, 69, 169ರ ಒಟ್ಟು 8 ಪ್ಯಾಕೇಜ್ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಸ್ತೆ ನಿರ್ಮಾಣದ ಮಾರ್ಗವನ್ನು ವಿನ್ಯಾಸಗೊಳಿಸುವಾಗ ಎಲ್ಲ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಪಘಾತ ರಹಿತ ರಸ್ತೆಗಳನ್ನಾಗಿ ರೂಪಿಸಬೇಕೆಂದರು.
ತಿರುವುಗಳಿರುವ ರಸ್ತೆಗಳನ್ನು ಸಾಧ್ಯವಾದಷ್ಟು ನೇರವಾಗಿ ಬದಲಾಯಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನು 10 ದಿನದೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿಗೆ ವೇಗ ನೀಡಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅನೂಪ್ ಶರ್ಮ, ಬೆಂಗಳೂರು ವೃತ್ತದ ರಾಜೇಶ್, ಸಿಸಿಎಫ್ ಕೆ.ಟಿ.ಹನುಮಂತಪ್ಪ, ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಮುಂತಾದವರಿದ್ದರು.
ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ಕೊಡಿ:ಶಿವಮೊಗ್ಗ: ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲೂಕಿನ ಹಲವು ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಿಎಸ್‌ಎನ್‌ಎಲ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯಲಿ ಸಮಾಲೋಚಿಸಿದರು.
ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಸ್ಥಾಪಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅರಣ್ಯ ಇಲಾಖೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಕರಾರು ಮಾಡಿಕೊಂಡು ಟವರ್ ಸ್ಥಾಪಿಸಬೇಕೆಂದರು. ಅರಣ್ಯ ಇಲಾಖೆಯಿಂದ ಇನ್ನೂ ಜಾಗ ಹಸ್ತಾಂತರವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಮೂರು ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.
ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಟವರ್‌ಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನರ ಬಳಕೆಗೆ ಒದಗಿಸಬೇಕೆಂದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಸಿಎಫ್ ಕೆ.ಟಿ.ಹನುಮಂತಪ್ಪ, ಬಿಎಸ್‌ಎನ್‌ಎಲ್ ಡಿಜಿಎಂ ಕೃಷ್ಣ ಮೊಗೇರ ಮುಂತಾದವರಿದ್ದರು.