ಜಿಲ್ಲೆ

ಕೃಷಿ ಪಂಪ್‌ಸೆಟ್ ವಿದ್ಯುತ್ ಸಮಸ್ಯೆ ಪರಿಹರಿಸಿ

ಹಾನಗಲ್ಲ: ರೈತರ ನಿಯೋಗ ಹುಬ್ಬಳ್ಳಿಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಶನ್ ಅವರನ್ನು ಗುರುವಾರ ಭೇಟಿಯಾಗಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿತು.

ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಕಾಮಗಾರಿ ಆರಂಭಿಸದಿರುವುದರಿಂದ ಹೊಲಗಳಲ್ಲಿರುವ ಟಿಸಿಗಳು ಓವರ್‌ಲೋಡ್ ಆಗಿ ಪದೇಪದೆ ಸುಡುತ್ತಿವೆ. ಈ ಹಿನ್ನೆಲೆಯಲ್ಲಿ ಅಕ್ರಮ ಸಕ್ರಮ ಯೋಜನೆಗೆ ಒಳಪಡುವ ರೈತ ಫಲಾನುಭವಿಗಳಿಗೆ ತಕ್ಷಣ ಟಿಸಿ ಹಾಗೂ ಕಂಬ ಅಳವಡಿಸಬೇಕು ಎಂದು ಮನವಿ ಮಾಡಿದರು.

ಹಾವೇರಿ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ವಿವಿಧ ತಾಲೂಕುಗಳಲ್ಲಿ ಗ್ರಿಡ್‌ಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಿ, ಟೆಂಡರ್ ಹಂತದಲ್ಲಿರುವ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು. ಶಿಥಿಲಾವಸ್ಥೆ ತಲುಪಿರುವ, ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಹಳೆಯ ಕಂಬ ಹಾಗೂ ತಂತಿ ಬದಲಿಸಬೇಕು. ಅಗತ್ಯವಿರುವ ರೈತರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅನುಕೂಲ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಹೆಸ್ಕಾಂ ಎಂಡಿ ಮೊಹಮ್ಮದ್ ರೋಶನ್, ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸುವ ಚಿಂತನೆಯಲ್ಲಿರುವುದರಿಂದ ಸರ್ಕಾರ ರೈತರ ಆರ್.ಆರ್. ಸಂಖ್ಯೆ ನೋಂದಣಿ ಕಾರ್ಯ ಸ್ಥಗಿತಗೊಳಿಸಿದೆ. ಶೀಘ್ರ ಸಂಪರ್ಕ ಯೋಜನೆಯೂ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದೆ. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಯೋಜನೆಯ ಮರು ಜಾರಿಗೆ ಮನವರಿಕೆ ಮಾಡುವುದಾಗಿ ಭರವಸೆ ನೀಡಿದರು.

ರೈತರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಮಸ್ಯೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳ ಇತ್ಯರ್ಥಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ನೂತನ ಗ್ರಿಡ್ ಸ್ಥಾಪನೆ ಕುರಿತು ಕೆಪಿಟಿಸಿಎಲ್ ಕ್ರಮ ಕೈಗೊಳ್ಳುತ್ತಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದು ವಿವರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಾಲತೇಶ ಪೂಜಾರ, ಮಲ್ಲಿಕಾರ್ಜುನ ಬಳ್ಳಾರಿ, ಮರಿಗೌಡ ಪಾಟೀಲ, ಪ್ರಭುಗೌಡ ಪ್ಯಾಟಿ, ಕಿರಣಕುಮಾರ ಗಡಿಗೋಳ, ಸೋಮಣ್ಣ ಜಡೆಗೊಂಡರ್, ಶಂಕರಗೌಡ ಪಾಟೀಲ, ಅಜ್ಜನಗೌಡ ಕರೇಗೌಡರ, ಯಶವಂತ ಹಿರೇಕೆರೂರ ರೈತ ನಿಯೋಗದಲ್ಲಿದ್ದರು.