ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವಂತಹ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲದ ವೇಳೆ ಪ್ರತಿ ವಲಯದ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು. ಮುಖ್ಯವಾಗಿ ರಾಜ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜಕಾಲುವೆ ವಿಭಾಗದಿಂದ ನಿರಂತರವಾಗಿ ಹೂಳು ತೆಗದು ಸ್ವಚ್ಛತೆಗೊಳಿಸುವ ಕೆಲಸ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಸದ್ಯ ನಗರದಲ್ಲಿ 210 ಪ್ರವಾಹಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ವಲಯ ಆಯುಕ್ತರು ಅವುಗಳಿಗೆ ದೃಡೀಕರಿಸಬೇಕು. ಬಾಕಿಯಿರುವ 44 ಸ್ಥಳಗಳಲ್ಲಿ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಳ್ಳುವುದರ ಜತೆಗೆ ಶಾಶ್ವರ ಪರಿಹಾರ ಕಲ್ಪಿಸಬೇಕು. ರಸ್ತೆಗಳ ಮೇಲೆ ನೀರು ನಿಂತು ಸಂಚಾರ ದಟ್ಟಣೆ ಹೆಚ್ಚುವ ಸ್ಥಳಗಳ ಪಟ್ಟಿಯನ್ನು ಸಂಚಾರ ಪೊಲೀಸ್ ವಿಭಾಗದವರು ನೀಡಿದ್ದು, ಅಂತಹ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸ್ಲೂಯಿಸ್ ಗೇಟ್ ಅಳವಡಿಕೆಗೆ ಕ್ರಮ:
ಪಾಲಿಕೆ ಸುಪರ್ದಿಯಲ್ಲಿ 183 ಕೆರೆಗಳಿದ್ದು, ಈ ಪೈಕಿ 13 ಕೆರೆಗಳಿಗೆ ಪ್ರವಾಹ ತಡೆಯಲು ಸ್ಲೂಯಿಸ್ ಗೇಟ್ ಅಳವಡಿಸಲಾಗಿದೆ. ಅಳವಡಿಸುವ ಕೆರೆಗಳಲ್ಲಿ ನೀರು ತುಂಬಿದ್ದರೆ ನೀರಿನ ಮಟ್ಟ ಕಡಿಮೆ ಮಾಡಿ ಮಳೆ ನೀರು ತುಂಬಲು ಅವಕಾಶ ಮಾಡಿಕೊಡಬೇಕು. ಉಳಿದ ಕೆರೆಗಳಿಗೂ ಹಂತ-ಹಂತವಾಗಿ ಸ್ಲೂಯಿಸ್ ಗೇಟ್ ಅಳವಡಿಸಲು ಹಾಗೂ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ವರ್ ರಾವ್ ನಿರ್ದೇಶಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್ ವಲಯ ಆಯುಕ್ತರಾದ ಸತೀಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಕರೀಗೌಡ, ಸ್ನೇಹಲ್, ರಮೇಶ್, ಪ್ರಧಾನ ಅಭಿಯಂತರ ಪ್ರಹ್ಲಾದ್ ಉಪಸ್ಥಿತರಿದ್ದರು.
ವಲಯ ಮುಖ್ಯ ಆಯುಕ್ತರಿಗೆ ಸೂಚನೆ ಏನು?:
* ಗಾಳಿ ಮಳೆಗೆ ಧರೆಗುರುಳುವ ಮರ, ಕೊಂಬೆ ಕೂಡಲೇ ತೆರವುಗೊಳಿಸಬೇಕು.
* ಅಪಾಯ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಬೇಕು.
* ಪಾದಚಾರಿ ಮಾರ್ಗಗಳಲ್ಲಿ ದುರಸ್ತಿ ಹಾಗೂ ಸ್ವಚ್ಛತೆಯನ್ನು ಕೈಗೊಳ್ಳಬೇಕು.
* ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ಲಾರಿ ಪಾಯಿಂಟ್ ಸ್ಥಳಾಂತರಿಸಿ:
ರಸ್ತೆ ಬದಿಯಲ್ಲಿ ಆಟೋ ಟಿಪ್ಪರ್‌ಗಳಿಂದ ಕಾಂಪ್ಯಾಕ್ಟರ್‌ಗಳಿಗೆ ತ್ಯಾಜ್ಯ ವರ್ಗಾವಣೆ ಮಾಡುತ್ತಿದ್ದು, ಅಲ್ಲಿ ವಿವಿಧ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಇವುಗಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಲು ಸೂಕ್ತ ಜಾಗ ಗುರುತಿಸಬೇಕು. ಆನಂತರವೂ ರಸ್ತೆ ಬದಿ ವರ್ಗಾವಣೆ ಮಾದಿರಲು ಪೌರಕಾರ್ಮಿಕರು ಹಾಗೂ ಇತರ ಸಿಬ್ಬಂದಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.