ಸೋಮವಾರಪೇಟೆ: ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಇನಕನಹಳ್ಳಿ ಗ್ರಾಮದ ನೇತಾಜಿ ನಗರದಲ್ಲಿ 25 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸೋಮವಾರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ ಕುಮಾರ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಯ ನಿರ್ಲಕ್ಷ್ಯದಿಂದ ಸಮಸ್ಯೆ ಉಲ್ಬಣವಾಗಿದೆ ಎಂದು ದೂರಿದರು.
ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಮಾತನಾಡಿ, ರಸ್ತೆ ಕಾಮಗಾರಿ ಸಂದರ್ಭ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ನೀರು ಸರಬರಾಜು ನಿಂತಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ದುರಸ್ತಿ ಪಡಿಸಿಲ್ಲ. ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸುಮಾರು 25 ದಿನಗಳಿಂದ ಗ್ರಾಮಸ್ಥರೆ ಸ್ವತಃ ಖಾಸಗಿ ವಾಹನಗಳಲ್ಲಿ ದಿನಕ್ಕೆ ಐದುನೂರು ರೂಪಾಯಿ ವ್ಯಯಿಸಿ ಕುಡಿಯುವ ನೀರು ತಂದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿ ಆವರಣದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದೀಪಕ್ ಎಚ್ಚರಿಸಿದರು. ಮಂಗಳವಾರ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಭರವಸೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ರೋಹಿತ್ ಗೌಡ, ಉಪಾಧ್ಯಕ್ಷ ಶಿವು, ನಗರ ಘಟಕದ ಅಧ್ಯಕ್ಷ ಮಂಜುನಾಥ್, ನಗರ ಕಾರ್ಯದರ್ಶಿ ರವೀಶ್ ಕಲ್ಕಂದೂರು, ಇನಕನಹಳ್ಳಿ ಶಿವಪ್ಪ, ಸೀಮಂತ್, ಮನೋಹರ, ಪುನೀತ್, ಹರೀಶ್ ಇತರ ಪದಾಧಿಕಾರಿಗಳು ಇದ್ದರು.