ಶ್ರೀನಿವಾಸಪುರ ತಾಲೂಕಿನ ಎಪಿಎಂಸಿ ಕಚೇರಿಗೆ ಉಪಲೋಕಾಯುಕ್ತ ವೀರಪ್ಪ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಎಸ್​ಪಿ ವಿ.ಧನಂಜಯ್​, ಕೋಲಾರ ನ್ಯಾಯಾಧೀಶ ಸುನಿಲ್​ ಎಸ್​. ಹೊಸಮನಿ ಇದ್ದರು. 
ಜಿಲ್ಲೆ

ಸಾರ್ವಜನಿಕರ ಸಮಸ್ಯೆ ಪರಿಹರಿಸಿ

ಕೋಲಾರ ಡೆಸ್ಕ್

ಉಪ ಲೋಕಾಯುಕ್ತ ವೀರಪ್ಪ ಸೂಚನೆ - ವಿವಿಧ ಇಲಾಖೆ ಅಧಿಕಾರಿಗಳಿಗೆ ತರಾಟೆ

ಶ್ರೀನಿವಾಸಪುರ: ಸರ್ಕಾರದ ಕೆಲಸ ದೇವರ ಕೆಲಸವೆಂಬಂತೆ ಮಾಡಿ ಕಾಲ ಕಾಲಕ್ಕೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತ ವೀರಪ್ಪ

ತರಾಟೆಗೆ ತೆಗದುಕೊಂಡರು.

ಪಟ್ಟಣದ ಸರ್ಕಾರಿ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಅವರು ರೈತರ ಸಮಸ್ಯೆ ಆಲಿಸಿ, ನೀವು ಇಲ್ಲದೇ ಎಪಿಎಂಸಿ ಅಧಿಕಾರಿಗಳು ಹಾಗೂ ಏಜೆಂಟ್​ಗಳು ಇರಲು ಸಾಧ್ಯವಿಲ್ಲ, ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ನಾವು ಬಂದಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ರೈತರಾದ ತಿನ್ನಲಿ ರಾಮಚಂದ್ರಾರೆಡ್ಡಿ, ದೇವರಾಜ್​ ನಮ್ಮ ಬಳಿ 10 ರೂ. ಕಮೀಷನ್​ ಪಡೆಯುತ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಯ ಬಗ್ಗೆ ದೂರಿದರು. ಸ್ಥಳದಲ್ಲಿಯೇ ಇದ್ದ ಕಾರ್ಯದರ್ಶಿಯೊಂದಿಗೆ ಮಾತನಾಡಿ ಯಾವತ್ತಾದರೂ ನೀವು ರೈತರ ಸಮಸ್ಯೆಯನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಕಾರ್ಯದರ್ಶಿ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದರು.

ರೈತ ದೇವರೆಡ್ಡಿಹಳ್ಳಿ ಮಾರಪ್ಪರೆಡ್ಡಿ ಮಾತನಾಡಿ, ಅಮೀರ್​ಜಾನ್​ ಎಂಬುವವರಿಗೆ ಕೆಳದ ಮೂರು ವರ್ಷಗಳ ಹಿಂದೆ ಮಾವಿನ ಫಸಲು ನೀಡಿದ್ದು, ಅದಕ್ಕೆ ಸಂಬಂಧಿಸಿದಂತೆ 70 ಸಾವಿರ ರೂ. ನೀಡಿ ಉಳಿದ 3 ಲಕ್ಷ ರೂ. ಕೊಡಬೇಕು ಆದರೆ ಇದುವರೆಗೂ ಕೊಟ್ಟಿಲ್ಲ ಎಂದು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿಗೆ ಅಮೀರ್​ಜಾನ್​ ಅವರನ್ನು ಕರಿಸಿ ಮಾರಪ್ಪರೆಡ್ಡಿ ಎಂಬುವವರ ಬಾಕಿ ಹಣವನ್ನು ಹಿಂದುರುಗಿಸುವಂತೆ ಸೂಚಿಸಿದರು. ಹಣ ನೀಡದಿದ್ದರೆ ಆತನ ಪರವಾನಗಿ ರದ್ದುಪಡಿಸುವಂತೆ ಸೂಚಿಸಿದರು.

ಎಪಿಎಂಸಿಯಲ್ಲಿ ತೂಕದ ಮಿಷನ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ನೀರಿನ ಸಮಸ್ಯೆ, ಮಳೆ ಬಂದರೆ ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ನಿಲ್ಲತ್ತದೆ. ನೈರ್ಮಲ್ಯ ಇಲ್ಲವೇ ಇಲ್ಲ, ರೈತಭವನದಲ್ಲಿನ ಕೊಠಡಿಗಳ ಮೇಲ್ಛಾವಣಿ ಕಿತ್ತುಬರುತ್ತಿದೆ ಅಲ್ಲದೆ ಶೌಚಗೃಹ ಸ್ವಚ್ಛ ಇಲ್ಲದಿರುವ ಬಗ್ಗೆ ಗಮನಹರಿಸಿ ಕಾರ್ಯದರ್ಶಿಗೆ ಮೂಲ ಸೌಲಭ್ಯಗಳನ್ನು ಶೀಘ್ರ ಸರಿಪಡಿಸುವಂತೆ ಹಾಗೂ ರಸ್ತೆಯಲ್ಲಿ ವಾಹನಗಳ ದಟ್ಟನೆಯಿಂದಾಗಿ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ, ವಾಹನಗಳ ಸಂಚಾರ ಸರಿಪಡಿಸುವಂತೆ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಸೂಚಿಸಿದರು. ಲೋಕಾಯುಕ್ತ ನ್ಯಾಯಾಧೀಶ ಎನ್​.ವಿ.ಅರವಿಂದ್​, ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ, ಇಒ ಎಸ್​.ಶಿವಕುಮಾರಿ, ಪೊಲೀಸ್​ ಇನ್​ಸ್ಪೆಕ್ಟರ್​ ಮಹ್ಮದ್​ ಗೊರವನಕೊಳ್ಳ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್​, ಲೋಕಾಯುಕ್ತ ಇನ್​ಸ್ಪೆಕ್ಟರ್​ಗಳಾದ ಯಶ್ವಂತ್​, ಆಂಜನಪ್ಪ ಇದ್ದರು.

ಪೋನ್​ಪೇ ಪರಿಶೀಲನೆ

ಪುರಸಭೆಗೆ ಭೇಟಿ ನೀಡಿ ಪಟ್ಟಣದಲ್ಲಿ ಎಲ್ಲ ಬಡವಾಣೆಗಳ ಕಟ್ಟಡಗಳ, ಸೈಟ್​ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಟ್ಯಾಕ್ಸ್​ ಎಷ್ಟು ಕಟ್ಟಬೇಕು, ಎಷ್ಟು ಬಾಕಿ ಇದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಹಸಿ ಕಸ, ಒಣ ಕಸ ಬೇರ್ಪಡಿಸುವ ಬಕೆಟ್​ಗಳನ್ನು ತರಿಸಿ ಅದರ ಬೆಲೆ ವಿಚಾರಿಸಿದಾಗ 250 ರೂ. ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಮಾರಕಟ್ಟೆಯಲ್ಲಿ 50 ರೂ.ಗೆ ಸಿಗುವ ಬಕೆಟ್​ಗೆ ಯಾಕಿಷ್ಟು ಖರ್ಚು ಎಂದು ಪಶ್ನಿಸಿದ ಅವರ, ಅನುಮಾನಾಸ್ಪದ ಸಿಬ್ಬಂದಿಯನ್ನು ಕರೆಯಿಸಿ, ಮೊಬೈಲ್​ನಲ್ಲಿನ ೋನ್​ಪೇ ವಹಿವಾಟು ಪರೀಶೀಲಿಸಿ, 1ವರ್ಷದ ಬ್ಯಾಂಕ್​ ಖಾತೆಯ ಮಾಹಿತಿ ನೀಡುವಂತೆ ಹಾಗೂ ಆನ್​ಲೈನ್​ ಗೇಮ್​ ಆಡುತ್ತಿದ್ದ ಸಿಬ್ಬಂದಿಯನ್ನು ಕರೆಸಿ ತರಾಟೆ ತೆಗದುಕೊಂಡರು.

ಅವ್ಯವಸ್ಥೆಗಳ ಗೂಡಾದ ಆಸ್ಪತ್ರೆ

ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ಈ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ತುಂಬಾ ಚೆನ್ನಾಗಿ ನಿರ್ವಹಿಸಲಾಗುತ್ತಿತ್ತು. ಆದರೆ ಇಂದು ಅವ್ಯವಸ್ಥೆಗಳ ಗೂಡಾಗಿದೆ ಎಂದು ಉಪಲೋಕಾಯುಕ್ತರು ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೂರಾರು ಜನ ಬಂದಿದ್ದರೂ ನಾಲ್ವರು ವೈದ್ಯರು ಇಲ್ಲದೆ ಸಾರ್ವಜನಿಕರು ಪರಿತಪಿಸುತ್ತಿದ್ದರು. ಔಷಧಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುತ್ತಿಲ್ಲ. ಖಾಸಗಿ ಅಂಗಡಿಯಿಂದ ತರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಡಿಎಚ್​ಒ, ಟಿಎಚ್​ಒ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ತಕ್ಷಣ ಈ ಆಸ್ಪತ್ರೆ ಸಿಬ್ಬಂದಿ ಹಾಗೂ ಔಷಧ ಕೊರತೆ ಸರಿಪಡಿಸುವಂತೆ ಸೂಚಿಸಿದರು.

ಸ್ವಚ್ಛತಾ ಸಿಬ್ಬಂದಿ ವಜಾ

ಕೆಎಸ್​ಆರ್​ಟಿಸಿ ಹೊಸ ಬಸ್​ ನಿಲ್ದಾಣ ಪರಿಶೀಲನೆ ವೇಳೆ ಆವರಣದಲ್ಲಿ ಮಧ್ಯದ ಖಾಲಿ ಪ್ಯಾಕೆಟ್​ಗಳನ್ನು ನೋಡಿ ಕೆಂಡಾಮಂಡಲರಾಗಿ ವ್ಯವಸ್ಥಾಪಕ ವೇಣುಕುಮಾರ್​ ಅವರನ್ನು ತರಾಟೆಗೆ ತೆಗದುಕೊಂಡರು, ಆಗ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ವೇಣುಕುಮಾರ್​ ತಿಳಿಸಿದಾಗ ತಕ್ಷಣವೇ ಸಿಬ್ಬಂದಿಯನ್ನು ವಜಾ ಮಾಡುವಂತೆ ಸೂಚಿಸಿದರು.

ಬಾರ್​ ಮಾಲೀಕರಿಗೆ ನೋಟಿಸ್​

ತಾಲೂಕಿನ ಕೆಲ ಹಳ್ಳಿಗಳ ಶಾಲೆಗಳ ಪಕ್ಕದಲ್ಲಿಯೇ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಲ್ಲದೆ ಕೆಲ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದರೆ. ಬಾರ್​ ನಿಗದಿತ ಸಮಯಕ್ಕೆ ತರೆಯದೆ ಅವಧಿಗೂ ಮುನ್ನಾ ಅಂಗಡಿ ತೆಗೆಯುತ್ತಿದ್ದು ಬಾರ್​ ಮಾಲೀಕರಿಗೆ ನಿಗದಿತ ಸಮಯಕ್ಕೆ ಅಂಗಡಿ ತೆರಯುವಂತೆ ನೋಟಿಸ್​ ನೀಡುವಂತೆ ಸೂಚಿಸಿ, ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಮಧ್ಯ ಮರಾಟವಾಗದಂತೆ ಅಬಕಾರಿ ಅಧಿಕಾರಿ ಪುಷ್ಪಾ ಅವರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.