ಮೈಸೂರು: ಕಬಿನಿ ಹಾಗೂ ಕೆಆರ್‌ಎಸ್‌ನಿಂದ ಪ್ರತಿನಿತ್ಯ ಸಮರ್ಪಕವಾಗಿ ನಗರಕ್ಕೆ ನೀರು ಸರಬರಾಜಾಗುತ್ತಿದ್ದರೂ ಕೃಷ್ಣರಾಜ ಕ್ಷೇತ್ರದ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆಗಳು ಕಂಡು ಬರುತ್ತಿದ್ದು, ಕ್ಷೇತ್ರದಲ್ಲಿ ನೀರು ಪೂರೈಕೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸವ ನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷ್ಣರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿ, ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಕಾವೇರಿ ನದಿ ಮೂಲಕ ನೀರು ಸಮುದ್ರ ಪಾಲಾಗುತ್ತಿದ್ದರೂ ನಗರದ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಕೂಡಲೇ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಬಗೆಹರಿಸಬೇಕು ಎಂದರು.
ಬೆಮೆಲ್‌ನಗರ, ಶ್ರೀರಾಂಪುರ, ಅರವಿಂದನಗರ, ಸುಣ್ಣದಕೇರಿ, ಕಾಕರವಾಡಿ, ಹುಲ್ಲಿನ ಬೀದಿ, ಚಾಮುಂಡಿಪುರಂ ಮೊದಲಾದ ಬಡಾವಣೆಗಳಿಗೆ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಕೃಷ್ಣರಾಜ ಕ್ಷೇತ್ರಕ್ಕೆ ಎಷ್ಟು ನೀರನ್ನು ಡ್ರಾ ಮಾಡಲಾಗುತ್ತಿದೆ, ಎಷ್ಟು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಶಾಸಕರು ಬಯಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಮಾತನಾಡಿ, ನಗರದ ಟ್ಯಾಂಕ್‌ಗಳಲ್ಲಿ ಓವರ್ ಫ್ಲೋ ತಡೆಯಲು ಸೆನ್ಸಾರ್ ಅಳವಡಿಸಬೇಕು. ಜತೆಗೆ ಬಲ್ಕ್ ಪ್ರೋ ಮೀಟರ್‌ಗಳನ್ನು ಅಳವಡಿಸಿದರೆ ಸಮಸ್ಯೆ ಪರಿಹರಿಸಬಹುದು ಎಂದು ಸಲಹೆ ನೀಡಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮುಸ್ತಫಾ ಮಾತನಾಡಿ, ಕಬಿನಿ ನದಿಯಿಂದ ಕೆ.ಆರ್. ಕ್ಷೇತ್ರದ ಹಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇಟ್ಟಿಗೆಗೂಡು, ಗೌರಿಶಂಕರನಗರಕ್ಕೆ ಮೇಳಾಪುರ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಬಿನಿ ನದಿಯಿಂದ 60ಎಂಎಲ್‌ಡಿ ನೀರು ಡ್ರಾ ಮಾಡಲಾಗುತ್ತಿದ್ದು, ಮಣ್ಣು ಮಿಶ್ರಿತ ನೀರು ಪೂರೈಕೆಯಾಗುವುದನ್ನು ತಡೆಯಲು ಪಂಪ್, ಮೋಟಾರ್ ಅಪ್‌ಗ್ರೇಡ್ ಮಾಡಲಾಗಿದೆ. ನೀರು ಶುದ್ಧೀಕರಣ ಘಟಕದಿಂದ ಬಡಾವಣೆಗಳಿಗೆ ನೇರವಾಗಿ ನೀರು ಸರಬರಾಜು ಆಗುತ್ತಿದೆ. ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಪದೇ ಪದೆ ಈ ರೀತಿ ದೂರುಗಳು ಕೇಳಿ ಬಾರದ ಹಾಗೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನ.15 ರೊಳಗೆ ನೀರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಬಗೆ ಹರಿಸಬೇಕು ಎಂದು ನಿರ್ದೇಶ ನೀಡಿದರು.
ಚರಂಡಿ ಹೂಳು ತೆಗೆಯುವುದು, ಮರ ಟ್ರಿಮ್ ಮಾಡುವ ಕಾರ್ಯವನ್ನು ಅಧಿಕಾರಿಗಳು ನಿಯಮಿತವಾಗಿ ಮಾಡಬೇಕು. ಖಾಲಿ ನಿವೇಶನಗಳನ್ನು ಶುಚಿಗೊಳಿಸಬೇಕು. ನಗರದ ಸಾಕಷ್ಟು ಕಡೆಗಳಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಕೂಡಲೇ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಒಂದು ರಸ್ತೆ ಅಭಿವೃದ್ಧಿ ಪಡಿಸಿದರೆ ಮತ್ತೊಂದು ತಿಂಗಳಲ್ಲಿ ಯುಜಿಡಿ ಸಂಪರ್ಕಕ್ಕೆ ಆ ರಸ್ತೆಯನ್ನು ಅಗೆಯಲಾಗುತ್ತದೆ. ನಂತರ ಬೇರೊಂದು ಕಾರ್ಯಕ್ಕೆ ರಸ್ತೆ ಅಗೆಯಲಾಗುತ್ತದೆ. ಅಧಿಕಾರಿಗಳಲ್ಲಿ ಸಮನ್ವಯದ ಕೊರತೆಯಿಂದ ಸರ್ಕಾರದ ಹಣ ದುಂದುವೆಚ್ಚವಾಗುತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ವಾರ್ಡ್‌ಗೆ 75 ರಿಂದ 100 ಬೀದಿ ದೀಪಗಳ ಅವಶ್ಯಕತೆ ಇದೆ. ಕೆಲವು ಕಡೆಗಳಲ್ಲಿ ನಾನೇ ಸೋಲಾರ್‌ಲೈಟ್‌ಗಳನ್ನು ಹಾಕಿಸಿಕೊ ಟ್ಟಿದ್ದೇನೆ. ಅವಶ್ಯಕತೆ ಇರುವ ಕಡೆಗಳಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಮೋಹನಕುಮಾರಿ, ಜೆ.ಎಸ್.ಸೋಮಶೇಖರ್ ಹಾಗೂ ಇತರರು ಇದ್ದರು.
ಫುಡ್‌ಜೋನ್ ಕಾರ್ಯಾರಂಭವಾಗಲಿ: ನಗರದ ವಿವಿಧ ಕಡೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳಿಗೋಸ್ಕರ ಫುಡ್‌ಜೋನ್ ನಿರ್ಮಾಣ ಮಾಡಲಾಗಿದ್ದರೂ ಅಲ್ಲಿಗೆ ರಸ್ತೆ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. ಫುಡ್‌ಜೋನ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ ರಸ್ತೆ ಬದು ವ್ಯಾಪಾರಿಗಳ ಜತೆಗೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಫುಡ್‌ಜೋನ್‌ನಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇದ್ದು, ಕೂಡಲೇ ಅಲ್ಲಿ ವ್ಯಾಪಾರ ವಹಿವಾಟು ಪ್ರಾರಂಭ ಮಾಡಿಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ನಿರ್ದೇಶನ ನೀಡಿದರು.
ವಸತಿ ಯೋಜನೆಗೆ ಪ್ರತ್ಯೇಕ ಸಭೆ: ಕೃಷ್ಣರಾಜ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಸತಿ ಯೋಜನೆಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಸಭೆ ಆಯೋಜಿಸುವಂತೆ ಶಾಸಕ ಟಿ.ಎಸ್. ಶ್ರೀವತ್ಸ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಲಲಿತಾದ್ರಿಪುರ, ಗೊರೂರು ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಬಹುಮಹಡಿ ವಸತಿ ಸಮುಚ್ಛಯಗಳ ಕಟ್ಟಡಗಳ ಪ್ರಗತಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಕೊಳಚೆ ನಿರ್ಮೂಲನ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಎಂ.ರಾಮಚಂದ್ರ, ಕೃಷ್ಣರಾಜ ಕ್ಷೇತ್ರಕ್ಕೆ ಮಂಡಳಿಯಿಂದ 1329 ಮನೆಗಳು ಮಂಜೂರಾಗಿದ್ದು, 875 ಮನೆಗಳ ಕಾಮಗಾರಿ ಪ್ರಾರಂಭವಾಗಿದೆ. 150 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಇದೆ. ನಿವೇಶನ ಇಲ್ಲದೆ 350 ಮನೆಗಳ ನಿರ್ಮಾಣ ಕಾರ್ಯ ಶುರುವಾಗಿಲ್ಲ ಎಂದು ಮಾಹಿತಿ ನೀಡಿದರು.