ಕಡೂರು ತಾಪಂನಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ತಹಸೀಲ್ದಾರ್ ಎಂ.ಪಿ.ಕವಿರಾಜ್, ಇಒ ಪ್ರವೀಣ್, ರವೀಂದ್ರಕುಮಾರ್ ಇದ್ದರು.  
ಜಿಲ್ಲೆ

ಪರಿಹಾರ, ನೀರು ಪೂರೈಕೆ ಸಮರ್ಪಕವಾಗಿರಲಿ

ಎಸ್.ಎನ್.ರವೀಂದ್ರ

ಕಡೂರು: ತಾಲೂಕಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಬರ ಪರಿಸ್ಥಿತಿ ನಿರ್ವಹಿಸಬೇಕು. ಮಳೆ ಅಭಾವದಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ನಿರ್ದೇಶನ ನೀಡಿದರು.

ತಾಪಂನಲ್ಲಿ ಬುಧವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಕುಡಿಯುವ ನೀರಿಗೆ ತೀವ್ರ ತೊಂದರೆಯಾದ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಬೋರ್‌ವೆಲ್‌ಗಳನ್ನು ಕೊರೆಯುವುದರ ಬದಲಿಗೆ ರೀಬೋರ್ ಮಾಡಿಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಯಾರಿಂದಲೂ ಒಂದೂ ದೂರು ಬಾರದಂತೆ ಎಚ್ಚರ ವಹಿಸಿ. ಈ ಕುರಿತು ನಿತ್ಯ ವರದಿ ನೀಡಿ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ರವಿಶಂಕರ್ ಮಾತನಾಡಿ, ಕಾಮನಕೆರೆ, ಯಗಟಿ, ಕೆರೆಸಂತೆ, ಸಣ್ಣೇನಹಳ್ಳಿ, ಕಂಸಾಗರ, ಗುಡ್ಡೇಹಳ್ಳಿ ಸೇರಿದಂತೆ 14 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿರುವುದನ್ನು ಮನಗಂಡು ಬೋರ್‌ವೆಲ್‌ಗಳನ್ನು ಕೊರೆಯಿಸಲಾಗಿದ್ದು, ಪೈಪ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆ.ಎಸ್.ಆನಂದ್ ಮಾತನಾಡಿ, ಗೋವಿಂದಪುರ ಗ್ರಾಮದಲ್ಲಿ 3 ಬೋರ್‌ವೆಲ್‌ಗಳಳಲ್ಲಿ ನೀರಿಲ್ಲ. ಅಲ್ಲಿ ಕೊಳವೆಬಾವಿಯನ್ನು ರೀಬೋರ್ ಮಾಡಿಸಬೇಕು. ಗೋವಿಂದಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಅಲ್ಲಿನ ಕೊಳವೆಬಾವಿಯನ್ನು ಮತ್ತಷಷ್ಟು ಆಳಗೊಳಿಸಿ. ಖಾಸಗಿ ಕೊಳವೆ ಬಾವಿಗಳಿಂದಲಾದರೂ ನೀರು ಪಡೆಯಲು ಪ್ರಯತ್ನಿಸಿ. ಕಡೆಯ ಕ್ರಮವಾಗಿ ಟ್ಯಾಂಕರ್ ಮೂಲಕ ನೀರು ನೀರು ಪೂರೈಸಿ. ಎಲ್ಲ ಪಿಡಿಒಗಳು ಆರೋಗ್ಯ ಕೇಂದ್ರಗಳಿಗೆ ಸಮರ್ಪಕ ನೀರು ಪೂರೈಕೆ ಜತೆಗೆ 15ನೇ ಹಣಕಾಸಿನ ಅನುದಾನದಲ್ಲಿ ಕುಡಿಯುವ ನೀರು ಪೂರೈಸಿ ಎಂದು ನಿರ್ದೇಶನ ನೀಡಿದರು.
ತಾಪಂ ಆಡಳಿತಾಧಿಕಾರಿ ರವೀಂದ್ರಕುಮಾರ್, ತಹಸೀಲ್ದಾರ್ ಎಂ.ಪಿ.ಕವಿರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.