ಜಿಲ್ಲೆ

10 ದಿನದಲ್ಲಿ ಇ-ಖಾತಾ ಸಮಸ್ಯೆಗೆ ಪರಿಹಾರ: ಬಿಬಿಎಂಪಿ ಮುಖ್ಯ ಆಯುಕ್ತರ ಭರವಸೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಇ-ಖಾತಾ ದಾಖಲೆ ಪತ್ರ ಕಡ್ಡಾಯ ಮಾಡಿದ ಬಳಿಕ ಈ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತಿರುವುದಾಗಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಎರಡು ತಿಂಗಳಿಂದ ಇ-ಖಾತಾ ವಿತರಿಸಲು ವಿಳಂಬ ಆಗುತ್ತಿದ್ದರೂ, ಪಾಲಿಕೆ ಮಾತ್ರ ಸಮಸ್ಯೆ ಒಪ್ಪಲು ಸಿದ್ಧರಿಲ್ಲ ಎಂದು ಹಲವು ನಾಗರಿಕರು ದೂರಿದ್ದಾರೆ.

ಈ ವಿಚಾರವಾಗಿ ಸೋಮವಾರ ಸಮಜಾಯಿಷಿ ನೀಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇ-ಖಾತಾ ವಿತರಣೆಗೆ ಇದ್ದ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಹೆಚ್ಚುವರಿ ಎಆರ್‌ಒಗಳನ್ನು ನಿಯೋಜಿಸಿದ ನಂತರ ವಿತರಣೆಗೆ ವೇಗ ದೊರೆತಿದೆ. ಹಾಗಾಗಿ ಮುಂದಿನ 10 ದಿನಗಳಲ್ಲಿ ಸಮಸ್ಯೆಗೆ ಸ್ಪಷ್ಟ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರಕ್ಕೂ ಮುನ್ನ 40 ಸಾವಿರ ಅರ್ಜಿಗಳ ವಿಲೇವಾರಿಗೆ ಬಾಕಿ ಇತ್ತು. ಈಗ ಅವುಗಳ ಸಂಖ್ಯೆ 2 ಸಾವಿರಕ್ಕೆ ಇಳಿದಿದೆ. ನಿತ್ಯವೂ ಹೊಸದಾಗಿ 2 ಸಾವಿರ ಅರ್ಜಿಗಳು ಬರುತ್ತಿದ್ದು, ಇವುಗಳನ್ನು ಆದ್ಯತೆ ಮೇರೆಗೆ ಇ-ಖಾತಾ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಆರ್‌ಒ ಹುದ್ದೆ ಶ್ರೇಣಿಯ ಇತರ ವಿಭಾಗದ ಅಧಿಕಾರಿಗಳಿಗೆ ಸೌಲಭ್ಯ ವಿತರಣೆ ಸಂಬಂಧ ಲಾಗಿನ್ ಅವಕಾಶ ಮಾಡಿಕೊಡಲಾಗಿದೆ. ಆಯಾ ವಲಯಗಳಲ್ಲಿ ಸ್ವೀಕರಿಸಲಾಗುವ ಅರ್ಜಿಗಳ ವಿಲೇವಾರಿ ವಿಳಂಬ ಆದಲ್ಲಿ ನಾಗರಿಕರು ಸಹಾಯವಾಣಿ ಸಂಪರ್ಕಿಸಿ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ:

ಇ-ಖಾತಾ ವಿತರಣೆಯಲ್ಲಿ ಯಾವುದೇ ವಿಳಂಬ ಇಲ್ಲದೆ ಜನರಿಗೆ ಸೌಲಭ್ಯ ನೀಡುವಂತೆ ಎಆರ್‌ಒಗಳಿಗೆ ಸೂಚಿಸಲಾಗಿದೆ. ನಾಗರಿಕರು ನೀಡುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಸೌಲಭ್ಯ ಒದಗಿಸಬೇಕು. ಈ ವಿಚಾರದಲ್ಲಿ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ವಿವರಿಸಿದರು.