ಮಾಗಡಿ: ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ವಿರೋಧಿಸಿ ತಾಲೂಕು ವಕೀಲರ ಸಂದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಶಿರಸ್ತೇದಾರ್ ರಮೇಶ್ಗೆ ಮನವಿ ಸಲ್ಲಿಸಲಾಯಿತು.
ತಾಲೂಕು ವಕೀಲರ ಸಂದ ಅಧ್ಯಕ್ಷ ಸುರೇಶ್ ಮಾತನಾಡಿ,ಸ್ವಾತಂತ್ರ್ಯ ಬಂದಾಗಿನಿಂದಲೂ ಸೋಲೂರು ಹೋಬಳಿ ಮಾಗಡಿಯಲ್ಲಿದೆ. ಮಾಗಡಿಗೂ ಸೋಲೂರು ಜನರಿಗೂ ಅವಿನಾಭಾವ ಸಂಬಂಧವಿದೆ. ಕಂಚುಗಲ್ಲು ಬಂಡೇಮಠ, ಗದ್ದುಗೆ ಮಠ, ಚಿಲುಮೆ ಮಠ, ಆರ್ಯ ಈಡಿಗರ ಮಠ ಸೇರಿ ಸಾಕಷ್ಟು ದೇವಾಲಯಗಳನ್ನು ಹೊಂದಿರುವ ಹೋಬಳಿಯನ್ನು ಯಾವುದೇ ಕಾರಣಕ್ಕೂ ನೆಲಮಂಗಲಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ. ಈ ಸಂಬಂಧ ರಾಜ್ಯಪಾಲರು, ಜಿಲ್ಲಾಧಿಕಾರಿ, ಚುನಾವಣಾ ಆಯೋಗ ಹಾಗೂ ಹೈಕೋರ್ಟ್ಗೆ ರಿಟ್ ಸಲ್ಲಿಸಲಾಗುವುದು ಎಂದರು.
ಸೋಲೂರಿನಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದವರು ಹೆಚ್ಚಿರುವುದರಿಂದ ಮುಂದೆ ಮಾಗಡಿ ಮೀಸಲು ಕ್ಷೇತ್ರವಾಗಲಿದೆ ಎಂಬ ಉದ್ದೇಶದಿಂದ ಶಾಸಕ ಎಚ್.ಸಿ.ಬಾಲಕೃಷ್ಣ ಸೋಲೂರನ್ನು
ನೆಲಮಂಗಲ ಸೇರ್ಪಡೆಗೆ ಸಹಕಾರ ನೀಡಿದ್ದಾರೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇದೆ ಎಂದು ಸೋಲೂರನ್ನು ಬೇರೆ ತಾಲೂಕಿಗೆ ಸೇರಿಸಿದಂತೆ ಬಿಡದಿ&ಕೂಟಗಲ್ ಹೋಬಳಿಗಳನ್ನು ನಮಗೆ ನೀಡಲಿ. ರಾಜ್ಯದ 130ಕ್ಕೂ ಹೆಚ್ಚು ಹೋಬಳಿಯಲ್ಲಿ ಸೋಲೂರನ್ನು ಮಾತ್ರ ಸೇರಿಸುವ ಉದ್ದೇಶವಾದರೂ ಏನು? ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸ್ವಷ್ಟಪಡಿಸಬೇಕು ಎಂದು ಪಾಪಣ್ಣ ಆಗ್ರಹಿಸಿದರಲ್ಲದೇ ಶಾಸಕರು ರ್ನಿಲಕ್ಷ$್ಯ ತೋರಿದರೆ ತಾಲೂಕಿನ 175 ಮಂದಿ ವಕೀಲರು ನ್ಯಾಯಯುತವಾಗಿ ನಮ್ಮ ಹಕ್ಕು ಪಡೆಯುತ್ತೇವೆ ಎಂದರು.
ವಕೀಲ ಸಿದ್ದರಾಜು ಮಾತನಾಡಿ, ಸೋಲೂರು ಮಾಗಡಿಯ ಮುಕುಟ ಪ್ರಾಯವಾಗಿದ್ದು, ನೆಲಮಂಗಲಕ್ಕೆ ಇದರ ಅವಶ್ಯತೆ ಇಲ್ಲ. ರಾಜಕಾರಣಿಗಳು, ರಿಯಲ್ ಎಸ್ಟೆಟ್ ದಂಧೆಕೋರರು ಲಾಭಪಡೆಯಲು ಅನ್ಯಾಯವಾಗಿ ಮಾಗಡಿಯಿಂದ ಸೋಲೂರನ್ನು ಕಿತ್ತುಕೊಳ್ಳುತ್ತಿದ್ದಾರೆ ಹೊರತು ಜನರಿಗೆ ಅನುಕೂಲ ಮಾಡಲು ಅಲ್ಲ. ಮಾಗಡಿ ಕಟ್ಟಿದ ಕೆಂಪೇಗೌಡರ ಜಾಗವನ್ನು ಬೇರೊಬ್ಬರಿಗೆ ಹಂಚಿದರೆ ನಾವು ಸುಮ್ಮನಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸೋಲೂರಿನ ಜನರು ಒಗ್ಗಟ್ಟಾಗಿ ಮಾಗಡಿಯಲ್ಲೇ ಹೋಬಳಿಯನ್ನು ಉಳಿಸಿಕೊಳ್ಳಬೇಕು ಎಂದರು.
ಮಾಜಿ ಅಧ್ಯಕ್ಷ ಎಂ.ಎಸ್.ಸಿದ್ದಲಿಂಗಪ್ಪ, ವಕೀಲರಾದ ನಾರಾಯಣಸ್ವಾಮಿ, ರಾಮಚಂದ್ರು, ಭಾರತಿ, ಪ್ರಸಾದ್, ರಮೇಶ್, ಅನಿಲ್ ಕುಮಾರು, ನಾಗೇಶ್, ಉಮೇಶ್, ಗಣೇಶ್, ಚೇತನ್, ಪರಮೇಶ್, ಪ್ರಕಾಶ್, ಮಹೇಶ್, ರಮ್ಯಾ, ರವಿಪ್ರಕಾಶ್, ಸುಮಾ, ಯಶೋಧಾ, ಹಿರಣಯ್ಯ, ಸಹನಾ ಪಂಡಿತ್, ಹೇಮಮಾಲಿನಿ, ಪ್ರವಿಣ್, ನವೀನ್, ಆದಿತ್ಯ ಹಾಗೂ ಇತರರಿದ್ದರು.
ಕೆಂಪೇಗೌಡರ ವೀರಸಮಾಧಿ ಕಿತ್ತುಕೊಂಡರೆ ಕೋಟೆ ಅಭಿವೃದ್ಧಿಗೆ ₹ 103 ಕೋಟಿ ಏಕೆ
ಮಾಜಿ ಅಧ್ಯಕ್ಷ ಜಿ.ಪಾಪಣ್ಣ ಮಾತನಾಡಿ, ಮಾಗಡಿ ಕೆಂಪೇಗೌಡರ ಜನ್ಮ ಸ್ಥಳವಾಗಿದ್ದು, ಸೋಲೂರು ದೇವಮೂಲೆಯಲ್ಲಿದೆ. ಸೋಲೂರು ಹೋಬಳಿಯಲ್ಲೇ ಕೆಂಪೇಗೌಡರ ವೀರಸಮಾಧಿ, ಕೋಟೆ ಇದೆ. ಇದನ್ನು ಕಿತ್ತುಕೊಂಡು ನೆಲಮಂಗಲಕ್ಕೆ ಸೇರಿಸುವುದು ಎಷ್ಟು ಸರಿ? ಕೆಂಪೇಗೌಡರ ವೀರಸಮಾಧಿ ಜಾಗವನ್ನು ಬೇರೊಂದು ಜಿಲ್ಲೆಗೆ ಬಿಟ್ಟುಕೊಡುವುದಾದರೆ 103 ಕೋಟಿ ರೂ. ವೆಚ್ಚದಲ್ಲಿ ಕೋಟೆ ಅಭಿವೃದ್ಧಿ ಏಕೆ? ಈ ಬೆಳವಣಿಗೆಯಲ್ಲಿ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಮಾಗಡಿ ಕೆಂಪೇಗೌಡರ ನಾಡು ಎನ್ನುತ್ತಾರೆ. ಆದರೆ ಹೋಬಳಿಗಳನ್ನು ಬಿಟ್ಟು ಮಾಗಡಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸೋಲೂರನ್ನು ನೆಲಮಂಗಲಕ್ಕೆ ಸೇರಿಸದಂತೆ ಈ ಹಿಂದೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಯಾವುದೇ ಕಾರಣಕ್ಕೂ ಸೋಲೂರನ್ನು ಬಿಟ್ಟಕೊಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೀಗ ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ಮೂಲಕ ಶಾಸಕರು ಮೋಸಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.