ಜಿಲ್ಲೆ

ಸೋಲೂರು ಗಡಿಯಲ್ಲೇ ಏರ್‌ಪೋರ್ಟ್! ; ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ

ರೇಷ್ಮೆ ನಗರ ಡೆಸ್ಕ್

ಮಾಗಡಿ : ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ತಾಲೂಕಿನ ಸೋಲೂರು ಹೋಬಳಿ ಹಾಗೂ ನೆಲಮಂಗಲ ಗಡಿ ಗ್ರಾಮಗಳ ಬಳಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಮೋಟಗಾನಹಳ್ಳಿ ಸುತ್ತಮುತ್ತಲ ಸ್ಥಳ ವೀಕ್ಷಣೆ ಮಾಡಿದ ಕೇಂದ್ರದ ತಂಡ, ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು, ಪೆಮ್ಮನಹಳ್ಳಿ, ನೆಲಮಂಗಲ ತಾಲೂಕಿನ ಬಸೇನಹಳ್ಳಿ ಬೆಟ್ಟದ ತುತ್ತ ತುದಿಯಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಅರಣ್ಯ ಪ್ರದೇಶ, ಗೋಮಾಳ, ವಸತಿ ಪ್ರದೇಶ, ತೋಟಗಾರಿಕೆ ಭೂಮಿ ಪರಿಶೀಲಿಸಿತು.

ನೆಲಮಂಗಲ, ಮಾಗಡಿ ತಾಲೂಕಿನ ಗಡಿ ಭಾಗ ಹಾಗೂ ಹಾರೋಹಳ್ಳಿ ವ್ಯಾಪ್ತಿ ಸೇರಿ ಮೂರು ಜಾಗಗಳನ್ನು ಅಧಿಕಾರಿಗಳ ತಂಡ ವೀಕ್ಷಿಸಿತು. ಪರಿಶೀಲನೆ ನಂತರ ಎಎಐ ತಂಡವು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಚರ್ಚಿಸಿದೆೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಹಿನ್ನೆಲೆಯಲ್ಲಿ ಎರಡನೇ ವಿಮಾನ ಅಗತ್ಯ ಇರುವ ಬಗ್ಗೆ ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆ ಹಿನ್ನೆಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅಧಿಕಾರಿಗಳ ತಂಡ ತಿಳಿಸಿದೆ.

ಎರಡನೇ ವಿಮಾನ ನಿಲ್ದಾಣದ ಬ್ಲೂ ಪ್ರಿಂಟ್‌ನೊಂದಿಗೆ ಬಂದ ಅಧಿಕಾರಿಗಳ ತಂಡ ಸುಮಾರು 5 ಸಾವಿರ ಕ್ಕೂ ಹೆಚ್ಚು ಎಕರೆ ವಿಶಾಲವಾದ ಪ್ರದೇಶವನ್ನು ವೀಕ್ಷಿಸಿದರು. ಅಧಿಕಾರಿಗಳು ವೀಕ್ಷಿಸಿದ ವ್ಯಾಪ್ತಿಯಲ್ಲಿ ಹೆಚ್ಚು ಕೃಷಿ ಭೂಮಿ ಇದ್ದು, ಕೆಲವೆಡೆ ಸರ್ಕಾರಿ ಗೋಮಾಳವು ಇರುವ ಬಗ್ಗೆ ಅಧಿಕಾರಿಗಳಿಗೆ ಮನದಟ್ಟಾಗಿದೆ. ಇಂದು ವೀಕ್ಷಿಸಿದ ಎರಡು ಕಡೆಯ ಜಾಗದಲ್ಲಿ ಒಂದು ಕಡೆಯ ಜಾಗ ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಅಧಿಕಾರಿಗಳು ಸರ್ವೇ ನಡೆಸಿ ತಯಾರು ಮಾಡಿರುವ ವಿಮಾನ ನಿಲ್ದಾಣದ ನೀಲಿ ನಕ್ಷೆಯನ್ನು ಸ್ಥಳದಲ್ಲಿ ಪರಿಶೀಲಿಸಿದರು. ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂಬ ಸುದ್ದಿತಿಳಿದ ರೈತರು ನಾಗರಿಕರು ಅಧಿಕಾರಿಗಳು ಭೂಮಿ ವೀಕ್ಷಣೆ ಮಾಡುವುದನ್ನು ಕಾತರದಿಂದ ವೀಕ್ಷಿಸಿದರು.

ಯಾವುದೇ ಭೂಮಿ ವೀಕ್ಷಣೆ ಮಾಡಬೇಕಾದರೆ ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳದಲ್ಲಿ ಇರುತ್ತಾರೆ. ಆದರೆ, ಇಲ್ಲಿ ಯಾವ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಇರಲಿಲ್ಲ. ಅವರ ಗೈರಿನಲ್ಲಿ ಕೇಂದ್ರ ತಂಡ ವೀಕ್ಷಿಸಿದ್ದಾರೆ.

ಸೋಲೂರು ಹೋಬಳಿ ಮಾಗಡಿ, ನೆಲಮಂಗಲಕ್ಕೆ ಸೇರಿಸುವ ವಿಚಾರದಲ್ಲಿ ಸಾಕಷ್ಟು ಪರ, ವಿರೋಧಗಳು ನಡೆಯುತ್ತಿರುವ ಮಧ್ಯೆ ವಿಮಾನ ನಿಲ್ದಾಣಕ್ಕೆ ಭೂಮಿ ವೀಕ್ಷಿಸುತ್ತಿರುವುದು ರಾಜಕೀಯವಾಗಿ ಯಾವ ತಿರುವು ಪಡೆಯಲಿದೆ ನೋಡಬೇಕಾಗಿದ್ದು, ಅಂತಿಮವಾಗಿ ಸೋಲೂರು ಹೋಬಳಿ ಗಡಿ, ನೆಲಮಂಗಲ ಗಡಿ ಭಾಗದಲ್ಲೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ತಂಡ ಅಂತಿಮಗೊಳಿಸಿದರೆ ಮುಂದೆ ಏನೆಲ್ಲ ತಿರುವುಗೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.