ಎನ್.ಆರ್.ಪುರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕಾನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಸಿ.ನಾಗೇಶ್ ಹೇಳಿದರು.
ಕಾನೂರು ಗ್ರಾಪಂನಲ್ಲಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಯಾವ ಮಾನದಂಡ ಇಟ್ಟುಕೊಂಡು ಡೀಮ್ಡ್ ಾರೆಸ್ಟ್, ಸೆಕ್ಷನ್-4 ಹಾಗೂ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಸಭೆಗೆ ತಿಳಿಸಬೇಕು. ಮುಂದೆ ಇನ್ನೊಂದು ವಿಶೇಷ ಗ್ರಾಮ ಸಭೆಯನ್ನು ಕರೆಯೋಣ. ಆ ಸಭೆಗೆ ತರೀಕೆರೆ ಉಪ ವಿಭಾಗಾಧಿಕಾರಿ, ಎನ್.ಆರ್.ಪುರ ತಹಸೀಲ್ದಾರ್ ಹಾಗೂ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿಗಳು ಆಗಮಿಸಿ ಗ್ರಾಮಸ್ಥರಿಗೆ ವಿವರಣೆ ಕೊಡಬೇಕು. ಆ ಸಭೆಗೆ ಅಧಿಕಾರಿಗಳು ಬಾರದಿದ್ದರೆ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಸ್ತೂರಿ ರಂಗನ್ ವಿರುದ್ಧ ಗ್ರಾಮ ಪಂಚಾಯಿತಿಯಿಂದ ಹಾಗೂ ವೈಯಕ್ತಿಕವಾಗಿಯೂ ಆಕ್ಷೇಪಣೆ ಸಲ್ಲಿಸಬೇಕು ಎಂದರು.
ಕಾನೂರು ಗ್ರಾಪಂ ಅಧ್ಯಕ್ಷ ಎಸ್.ರತ್ನಾಕರ್ ಮಾತನಾಡಿ, ಕಸ್ತೂರಿ ರಂಗನ್ ವಿರೋಧಿಸಿ ಗ್ರಾಮ ಪಂಚಾಯಿತಿಯಿಂದ ಆಕ್ಷೇಪಣೆ ಸಲ್ಲಿಸೋಣ. ಎಲ್ಲ ಗ್ರಾಮಸ್ಥರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಸಂಬಂಧಪಟ್ಟ ಗ್ರಾಮವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಅರಣ್ಯ ಕಾನೂನು ಇರುವುದರಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದು ಬೇಡ ಎಂದರು.
ಗ್ರಾಪಂ ಸದಸ್ಯ ಮನೋಹರ್ ಮಾತನಾಡಿ, ರೈತರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, 4-1 ನೋಟಿಫಿಕೇಶನ್ ವಿರುದ್ಧ ಹೋರಾಟ ರೂಪಿಸೋಣ ಎಂದರು.
ಸಭೆಯಲ್ಲಿ ಮುಂದಿನ ಹೋರಾಟ ರೂಪಿಸಲು ಕಾನೂರು ಗ್ರಾಮ ಪಂಚಾಯಿತಿ ಮಟ್ಟದ ಹೋರಾಟ ಸಮಿತಿ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಎಂ.ಸಿ.ನಾಗೇಶ್, ಉಪಾಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ರತ್ನಾಕರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರತಿ ಗ್ರಾಮಕ್ಕೆ 6 ಜನರಂತೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಪಿಡಿಒ ಶ್ರೀನಿವಾಸ್ ವಿಶೇಷ ಗ್ರಾಮ ಸಭೆ ಕರೆದಿರುವ ಉದ್ದೇಶದ ಬಗ್ಗೆ ವಿವರಿಸಿದರು. ಗ್ರಾಪಂ ಸದಸ್ಯರಾದ ನಾಗರತ್ನಾ, ಶಿವಮೂರ್ತಿ, ಸವಿತಾ, ಜಯಲಕ್ಷ್ಮೀ, ವಿಜಯಕುಮಾರ್, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.