ಹುಣಸೂರು : ನಗರದ ಘನತ್ಯಾಜ್ಯಗಳನ್ನು ವಿಲೇವಾರಿ ಮಾಡಲು ತಮಿಳುನಾಡಿನ ಖಾಸಗಿ ಕಂಪನಿಗೆ ನೀಡಿದ್ದ ಟೆಂಡರ್ ಕುರಿತು ನಗರಸಭಾ ಸದಸ್ಯರಿಗೆ ಮಾಹಿತಿಯನ್ನೇ ಅಧಿಕಾರಿಗಳು ನೀಡಿಲ್ಲದ ಕಾರಣ ಯೋಜನೆ ಜಾರಿಯಾಗಬಾರದೆಂದು ಹಠ ಹಿಡಿದು ತಡೆಯೊಡ್ಡಿದ ಪ್ರಸಂಗ ಗುರುವಾರ ನಡೆದಿದೆ.
ನಗರದ ಹುಣಸೂರು ರತ್ನಪುರಿ ರಸ್ತೆಯಲ್ಲಿರುವ ನಾಲ್ಕೂವರೆ ಎಕರೆ ಪ್ರದೇಶದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸರಿ ಸುಮಾರು 25 ಸಾವಿರ ಟನ್ ತ್ಯಾಜ್ಯ ಸಂಗ್ರಹವಾಗಿದೆ. ಈ ತ್ಯಾಜ್ಯವನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲು ತಮಿಳುನಾಡಿನ ನೆಪ್ಚೂನ್ ಆಟೋಮೆಕ್ಯಾನಿಕ್ಸ್ ಸಂಸ್ಥೆಗೆ 1.76 ಕೋಟಿ ರೂ.ಗಳಿಗೆ ನೀಡಲಾಗಿತ್ತು. ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಚಾಲನೆ ನೀಡಲು ಶಾಸಕ ಜಿ.ಡಿ. ಹರೀಶ್‌ಗೌಡ ಗುರುವಾರ ಆಗಮಿಸಿದ್ದರು. ಈ ವೇಳೆ ಯೋಜನೆ ಕುರಿತು ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಮತ್ತು ಸ್ವತ: ಶಾಸಕರಿಗೂ ಮಾಹಿತಿಯನ್ನೇ ನೀಡಿಲ್ಲವೆಂದು ಸದಸ್ಯೆ ಗೀತಾ ನಿಂಗರಾಜು ಆಕ್ಷೇಪಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೌರಾಯುಕ್ತೆ ಕೆ.ಮಾನಸಾ ಮತ್ತು ಪರಿಸರ ಇಂಜಿನಿಯರ್ ಸೌಮಾ ಅವರಿಂದ ಸ್ಪಷ್ಟನೆ ಕೇಳಿದರು. ಪೌರಾಯುಕ್ತೆ ಪ್ರತಿಕ್ರಿಯಿಸಿ ಸ್ವಚ್ಛ ಭಾರತ್ - ಮಿಷನ್ 2 ಯೋಜನೆಯಡಿ ಡಿಯುಡಿಸಿಯಿಂದ ಕಸ ವಿಲೇವಾರಿಗೆ ನಿರ್ದೇಶನ ಬಂದಿದೆ. ಅದರಂತೆ ಟೆಂಡರ್ ಪ್ರಕ್ರಿಯೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಧ್ಯೆ ಪ್ರವೇಶಿಸಿದ ಶಾಸಕ, ಟೆಂಡರ್ ಕರೆದಿರುವುದು ನಗರಸಭೆಯಿಂದ. ಹಣ ನೀಡುವುದು ಕೇಂದ್ರ ಸರ್ಕಾರ. ನಗರಸಭೆಯಿಂದ ಟೆಂಡರ್ ಕರೆದ ನಂತರ ಈ ಕುರಿತು ಸದಸ್ಯರಿಗೆ ಮಾಹಿತಿ ನೀಡುವುದು ನಿಮ್ಮ ಕರ್ತವ್ಯ. ಈಗಾಗಲೇ ಕಳೆದ ಮೂರು ತಿಂಗಳಿನಿಂದ ಮೂರು ಸಭೆಗಳನ್ನು ಆಯೋಜಿಸಿದ್ದೇನೆ. ಹೀಗಿದ್ದೂ ಸಭೆಯಲ್ಲಿ ವಿಷಯ ಪ್ರಸ್ತಾಪಿಸದಿರಲು ಕಾರಣವೇನು? ಎಲ್ಲ ಸಭೆಗಳನ್ನು ನಾನೇ ಖುದ್ದು ಪಾಲ್ಗೊಂಡು ನಡೆಸಿದ್ದೇನೆ. ಇದು ನಿಮ್ಮ ಕರ್ತವ್ಯದ ಲೋಪ ತೋರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ನೆರೆದಿದ್ದ ನಗರಸಭಾ ಸದಸ್ಯರು, ಮುಂದಿನ ಸಭೆಯಲ್ಲಿ ಈ ಕುರಿತು ಸದಸ್ಯರಿಗೆ ಮಾಹಿತಿ ನೀಡಿ. ಸದಸ್ಯರು ಟೆಂಡರ್ ಪ್ರಕ್ರಿಯೆ ಕುರಿತು ನಿರ್ಧಾರ ತೆಗದುಕೊಳ್ಳುತ್ತೇವೆ. ನಂತರ ಯೋಜನೆಗೆ ಚಾಲನೆ ನೀಡೋಣ ಎಂದು ಒತ್ತಾಯಿಸಿದಾಗ ಶಾಸಕ ಹರೀಶ್‌ಗೌಡ ಒಪ್ಪಿಗೆ ಸೂಚಿಸಿದರು. ಈ ವೇಳೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಸದಸ್ಯರಾದ ದೇವರಾಜ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಸತೀಶ್‌ಕುಮಾರ್, ಶ್ರೀನಾಥ್ ಇತರರು ಹಾಜರಿದ್ದರು.