ಸಿರಗುಪ್ಪದಲ್ಲಿ ಉಪತಹಸೀಲ್ದಾರ್ ರಾಘವೇಂದ್ರಗೆ ಎಂ.ಹೊನ್ನೂರಮ್ಮ ದಿ.ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಮನವಿ ಸಲ್ಲಿಸಿದರು. ಪ್ರಾಚಾರ್ಯ ಜಿ.ಕೊಟ್ರಪ್ಪ, ಉಪನ್ಯಾಸಕರಾದ ರುದ್ರಪ್ಪ, ರಾಮಕೃಷ್ಣ, ಪವನ್, ಬಸಪ್ಪ, ಶ್ರೀನಿವಾಸ, ಅಶೋಕ್ ಕುಮಾರ, ಚಂದ್ರಕಾಂತ ಇದ್ದರು. 
ಜಿಲ್ಲೆ

ಘನತ್ಯಾಜ್ಯ ಘಟಕದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ

ನರೇಶ್ ಕುಮಾರ್

ಸಿರಗುಪ್ಪ: ನಗರದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಗೆ ಮತ್ತು ವಾಸನೆ ಬರುತ್ತಿದ್ದು, ಕುಳಿತುಕೊಳ್ಳಲು ಆಗುತ್ತಿಲ್ಲವೆಂದು ನಗರದ ಎಂ.ಹೊನ್ನೂರಮ್ಮ ದಿ. ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಗುರುವಾರ ಉಪತಹಸೀಲ್ದಾರ್ ರಾಘವೇಂದ್ರಗೆ ಮನವಿ ಸಲ್ಲಿಸಿದರು.

ಪ್ರಾಚಾರ್ಯ ಜಿ.ಕೊಟ್ರಪ್ಪ ಮಾತನಾಡಿ, ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರವೇ ನಮ್ಮ ಕಾಲೇಜು ಇದೆ. ಘಟಕದಲ್ಲಿ ವಿದ್ಯುತ್ ಅವಘಡದಿಂದಾಗಿ ಕಸಕ್ಕೆ ಬೆಂಕಿ ಬಿದ್ದು, ಹೊಗೆ ಮತ್ತು ವಾಸನೆ ಹರಡುತ್ತಿದೆ. ಇದು ಮರುಕಳಿಸುತ್ತಿದೆ. ಕಾಲೇಜಿನಲ್ಲಿರುವ 700 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಕೆಲ ವಿದ್ಯಾರ್ಥಿಗಳಿಗೆ ಉಸಿರಾಟ, ಅನಾರೋಗ್ಯದ ಸಮಸ್ಯೆ ಉಂಟಾಗುತ್ತಿದೆ.

ಈ ಬಗ್ಗೆ ವಿದ್ಯಾರ್ಥಿಗಳು ನಮಗೆ ಹಲವಾರು ಬಾರಿ ದೂರು ನೀಡಿದ್ದಾರೆ. ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳ್ಳಬೇಕೆಂದು ಒತ್ತಾಯಿಸಿದರು.

ಉಪನ್ಯಾಸಕರಾದ ರುದ್ರಪ್ಪ, ರಾಮಕೃಷ್ಣ, ಪವನ್, ಬಸಪ್ಪ, ಶ್ರೀನಿವಾಸ, ಅಶೋಕ್ ಕುಮಾರ, ಚಂದ್ರಕಾಂತ ಇದ್ದರು.