ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿರುವ ಮಾಜಿ ಸೈನಿಕರ ಕಲ್ಯಾಣ ಕೇಂದ್ರ. 
ಜಿಲ್ಲೆ

ಯಳ್ಳೂರಲ್ಲಿದೆ ಸೈನಿಕರ ದಂಡು

ಬೆಳಗಾವಿ: ಕುಂದಾನಗರಿಯಿಂದ 6 ಕಿ.ಮೀ. ದೂರದಲ್ಲಿರುವ ಯಳ್ಳೂರ ಗ್ರಾಮ 1,500ಕ್ಕೂ ಅಧಿಕ ಸೈನಿಕರನ್ನು ದೇಶಸೇವೆಗೆ ಸಮರ್ಪಿಸಿ ಗಮನ ಸೆಳೆದಿದೆ. ಈ ಊರಿನ ಯಾವುದೇ ಗಲ್ಲಿಗೆ ಕಾಲಿಟ್ಟರೂ, ಸಾಲು ಸಾಲಾಗಿ ಸೈನಿಕರ ಮನೆಗಳೇ ಕಣ್ಣಿಗೆ ಬೀಳುತ್ತವೆ. 14 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ ಸರ್ವಧರ್ಮಗಳ ಜನರಿದ್ದಾರೆ. ಹೆಚ್ಚಿನವರು ಕೃಷಿ ಅವಲಂಬಿಸಿದ್ದಾರೆ. ಭತ್ತ ಹಾಗೂ ತರಕಾರಿ ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ರೈತರು ಬೆಳೆಯುವ ಬಾಸುಮತಿ ಭತ್ತ ದೇಶದ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿದೆ.

ಗ್ರಾಮಕ್ಕೆ ಹಿರಿಮೆ: ಪ್ರಾಥಮಿಕ, ಪ್ರೌಢ ಸೇರಿ 10 ಶಾಲೆಗಳಿದ್ದು, ಬಾಲ್ಯದಲ್ಲೇ ಮಕ್ಕಳ ಮನದಲ್ಲಿ ದೇಶಪ್ರೇಮದ ಬೀಜ ಬಿತ್ತಲಾಗುತ್ತಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಸೈನಿಕರು, ಯುವಕರನ್ನು ಪ್ರೇರೇಪಿಸುತ್ತಿದ್ದಾರೆ. ಹೀಗಾಗಿ ಉತ್ಸಾಹದಿಂದಲೇ ಭಾರತಾಂಬೆ ಸೇವೆಗೆ ಅಣಿಯಾಗುತ್ತಿರುವ ಇಲ್ಲಿನ ಯುವಕರು ಸೈನಿಕರಾಗಿ ಮಾತ್ರವಲ್ಲ, ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಗ್ರಾಮದ ಹಿರಿಮೆ ಹೆಚ್ಚಿಸಿದ್ದಾರೆ. ಅಲ್ಲದೆ, ಶಿಕ್ಷಕರಾಗಿಯೂ ಹೆಚ್ಚಿನ ಜನರು ಸೇವೆ ಸಲ್ಲಿಸುತ್ತಿದ್ದಾರೆ.

ನಾಲ್ವರು ಹುತಾತ್ಮ: ಯಳ್ಳೂರಿನ ಪರಶುರಾಮ ಬಿರ್ಜೆ, ರಾಜಾರಾಮ ಮುರಕುಟೆ, ಮನೋಹರ ಮುಚ್ಚಂಡಿ ಹಾಗೂ ವಸಂತ ಧಾಮಣೇಕರ ದೇಶ-ವಿದೇಶದಲ್ಲಿ ನಡೆದ ಯುದ್ಧಗಳಲ್ಲಿ ಹುತಾತ್ಮರಾಗಿದ್ದಾರೆ. ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಒಟ್ಟು 10 ಸೈನಿಕರು ಮೃತಪಟ್ಟಿದ್ದಾರೆ. ಇಬ್ಬರು ಆತಂಕವಾದಿಗಳನ್ನು ಹತ್ಯೆಗೈದಿದ್ದರಿಂದ ಹವಾಲ್ದಾರ್ ಯಲ್ಲಪ್ಪ ಘಾಡಿ ಅವರಿಗೆ ಕೇಂದ್ರ ಸರ್ಕಾರ ‘ಸೇವಾ ಮೆಡಲ್’ ನೀಡಿ ಗೌರವಿಸಿದೆ. ಸೈನಿಕ ಯಲ್ಲಪ್ಪ ಪೋಟೆ ಖ್ಯಾತ ಕುಸ್ತಿಪಟುವಾಗಿದ್ದರು. ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಮಕ್ಕಳಿಬ್ಬರು ಲೆಫ್ಟಿನೆಂಟ್ ಕರ್ನಲ್: ಯಳ್ಳೂರ ಗ್ರಾಮದ ಸುಬೇದಾರ ಮೇಜರ್ ಅನಂತ ಕುಗಜಿ ಅವರ ಪುತ್ರ ಶ್ರೀಹರಿ ಹಾಗೂ ಪುತ್ರಿ ಪಂಕಜಾ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿರುವುದು ವಿಶೇಷ. ಅಲ್ಲದೆ, ಸುಬೇದಾರ ಮೇಜರ್ ಶಾಂತಾರಾಮ ಜಾಧವ ಪುತ್ರ ಮಯೂರ್ ಕರ್ನಲ್ ಆಗಿ, ಸುಬೇದಾರ ಬಾಲಚಂದ್ರ ಮುಚ್ಚಂಡಿ ಪುತ್ರ ಪ್ರವೀಣ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿದ್ದ ವಾಸುದೇವ ಜಾಧವ ಪುತ್ರ ಸುದರ್ಶನ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾವಿರಕ್ಕೂ ಅಧಿಕ ಜನರು ಭಾರತ ಮಾತೆಯ ಸೇವೆಯಲ್ಲಿ

‘ನಮ್ಮೂರಲ್ಲಿ ದೇಶಪ್ರೇಮದ ಕಾರಣಕ್ಕೆ ಹೆಚ್ಚಿನ ಯುವಕರು ಭಾರತೀಯ ಸೇನೆ ಸೇರುತ್ತಿದ್ದಾರೆ. ಪ್ರಸ್ತುತ 1 ಸಾವಿರಕ್ಕೂ ಅಧಿಕ ಜನರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 500 ಜನರು ಸೇವಾನಿವೃತ್ತಿ ಹೊಂದಿ ಊರಿಗೆ ಮರಳಿದ್ದಾರೆ. ಮಾಜಿ ಸೈನಿಕರ ಹಿತ ಕಾಯುವ ದೃಷ್ಟಿಯಿಂದ ಮಾಜಿ ಸೈನಿಕರ ಕಲ್ಯಾಣ ಕೇಂದ್ರ ಸ್ಥಾಪಿಸಲಾಗಿದೆ’ ಎಂದು ಮಾಜಿ ಸೈನಿಕರಾದ ಪುಂಡಲೀಕ ಪಾಟೀಲ, ಬಾಬುರಾವ್ ಮುರಕುಟೆ, ಡಾ. ಜಿ.ಐ.ಪಾಟೀಲ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.ಮಾಜಿ ಸೈನಿಕರ ನೇತೃತ್ವದಲ್ಲೇ ಎರಡು ಸಹಕಾರಿ ಸೊಸೈಟಿ ತೆರೆಯಲಾಗಿದ್ದು, ಗ್ರಾಮಸ್ಥರ ಸಂಕಷ್ಟಕ್ಕೆ ಮಿಡಿಯುತ್ತಿದ್ದೇವೆ. ಹಲವು ಸಾಮಾಜಿಕ ಕೆಲಸ ಕೈಗೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ, ನಾವು ದೇಶಕ್ಕೆ ಏನು ನೀಡಿದ್ದೇವೆ ಎಂಬುದು ಮುಖ್ಯ. ಈ ಪುಣ್ಯಭೂಮಿಯಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಇದೆ. ರಜೆಗೆ ಬಂದಾಗ, ಗ್ರಾಮದ ಶಾಲೆಗಳಲ್ಲಿ ಜರುಗುವ ರಾಷ್ಟ್ರೀಯ ಹಬ್ಬಗಳು ಮತ್ತು ವಿಶೇಷ ಸಂದರ್ಭ ನಮ್ಮನ್ನು ಅತಿಥಿಗಳಾಗಿ ಆಹ್ವಾನಿಸುತ್ತಾರೆ. ಭಾರತೀಯ ಸೇನೆ ಸೇರುವಂತೆ ನಾವು ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುತ್ತೇವೆ. ದೇಶದ ಸೇವೆ ಮಾಡುವುದು ಸೌಭಾಗ್ಯ.| ಸಚಿನ ಪಾಟೀಲ ಸೈನಿಕ, ಯಳ್ಳೂರ

| ಇಮಾಮಹುಸೇನ್ ಗೂಡುನವರ ಬೆಳಗಾವಿ