ಉಪ್ಪಿನಬೆಟಗೇರಿ: ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಉಪ್ಪಿನಬೆಟಗೇರಿಗೆ ಆಗಮಿಸಿದ ಈಶ್ವರ ಆಯಟ್ಟಿ ಅವರನ್ನು ಗುರುವಾರ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
ಹೊಸಪೇಟಿ ಓಣಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಈಶ್ವರ ಆಯಟ್ಟಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ಯುವಕರು ಪುಷ್ಪವೃಷ್ಠಿ ಮಾಡಿದರು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ಥಳೀಯ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಭಾರತಾಂಬೆಯ ಮಕ್ಕಳಾಗಿದ್ದು, ಅವರು ಮಾಡುವ ನಿಸ್ವಾರ್ಥ ಸೇವೆ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಆಯಟ್ಟಿ, 19 ವರ್ಷ ದೇಶ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ವೃತ್ತಿ ಜೀವನದ ದಿನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ವಿದ್ಯಾದಾನ ಸಮಿತಿ ಚೇರ್ಮನ್ ವೀರಣ್ಣಾ ಪರಾಂಡೆ ಮಾತನಾಡಿದರು. ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಮಂಜುನಾಥ ಮಸೂತಿ ಉದ್ಘಾಟಿಸಿದರು. ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಚನಬಸಪ್ಪ ಮಸೂತಿ, ಮಲ್ಲಣ್ಣ ಅಷ್ಟಗಿ, ಜಿ.ಆರ್. ಜವಳಗಿ, ಸುರೇಶಬಾಬು ತಳವಾರ, ಬಸೀರಅಹ್ಮದ ಮಾಳಗಿಮನಿ, ಮಾಜಿ ಸೈನಿಕ ಅಶೋಕ ವಿಜಾಪೂರ, ಫಕೀರಪ್ಪ ಶಿವಳ್ಳಿ, ಶಿವಪ್ಪ ವಿಜಾಪೂರ, ಪ್ರವೀಣ ಓಂಕಾರಿ, ಪಕೀರಪ್ಪ ಮಡಿವಾಳರ, ರಮೇಶ ಮಡ್ಡಿಕಾರ ಇದ್ದರು.