ರೇವತಗಾಂವ: ಕುಟುಂಬದಿಂದ ದೂರವಿದ್ದು, ಮಳೆ, ಬಿಸಿಲು, ಚಳಿ ಲೆಕ್ಕಿಸದೆ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಎಚ್.ಎಸ್.ಬನಸೋಡೆ ಹೇಳಿದರು.
ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ರಮಾನಂದ ಭೀಮಾಶಂಕರ ಕುಲಕರ್ಣಿ ಅವರಿಗಾಗಿ ಶಿರಾಡೋಣ ಗ್ರಾಮದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಅಭಿಮಾನಿ ಬಳಗ, ಗೆಳೆಯರ ಬಳಗ, ಗ್ರಾಮಸ್ಥರು ಹಮ್ಮಿಕೊಂಡಿದ್ದ ಸ್ವಾಗತ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ಮಹಾದೇವ ಪೂಜಾರಿ ಮಾತನಾಡಿ, ದೇಶದ ಏಳಿಗೆ, ರಕ್ಷಣೆಗಾಗಿ ರೈತರು ಹಾಗೂ ಯೋಧರ ಕೊಡುಗೆ ಅಪಾರವಾಗಿದೆ ಎಂದರು.
ನಿವೃತ್ತ ಯೋಧ ರಮಾನಂದ ಕುಲಕರ್ಣಿ ಮಾತನಾಡಿ, ತಾಯಿ ಭಾರತಾಂಬೆಯ ಸೇವೆ ಮಾಡಿದ್ದು ಬಹಳ ಖುಷಿ ನೀಡಿದೆ. ಇನ್ನೊಂದು ಜನ್ಮವಿದ್ದರೆ ನಾನು ಮತ್ತೆ ಸೈನಿಕನಾಗಿ ಭಾರತಮಾತೆಯ ಸೇವೆ ಮಾಡಲು ಸಿದ್ಧನಾಗಿದ್ದೇನೆ. ಸೈನಿಕರು ಕಷ್ಟ- ಸುಖ ಎರಡನ್ನೂ ಸಮನವಾಗಿ ಸ್ವೀಕರಿಸುವ ಮಾನಸಿಕ, ದೈಹಿಕ ಶಕ್ತಿಯನ್ನು ದೇವರು ನೀಡಿದ್ದಾನೆ ಎಂದರು.
ಚಡಚಣ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ ಮಾತನಾಡಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ವಿವಿಧ ನೃತ್ಯಗಳ ಮೂಲಕ ಗ್ರಾಮಸ್ಥರೊಂದಿಗೆ ಹನುಮಾನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಭವ್ಯ ವೇದಿಕೆಗೆ ಕರೆತರಲಾಯಿತು.
ಗ್ರಾಮದ ಯೋಧರು, ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕ ರಮಾನಂದ ಕುಲಕರ್ಣಿ ದಂಪತಿಯನ್ನು ಗಣ್ಯರು, ಸ್ನೇಹಿತರು, ಹಿತೈಷಿಗಳು, ಕುಟುಂಬಸ್ಥರು, ಸಂಬಂಧಿಕರು ಸನ್ಮಾನಿಸಿ ಗೌರವಿಸಿದರು. ಎಂ.ಎಲ್.ಪಾಂಡ್ರೆ ಸ್ವಾಗತಿಸಿದರು. ವಿಜಯಕುಮಾರ ಸಾತಪುತೆ ವಂದಿಸಿದರು. ಆರ್.ಎಂ.ಚೋಪಡೆ ವಂದಿಸಿದರು.