ಜಿಲ್ಲೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಸೈನಿಕನಿಗೆ ಅಂತಿಮ ವಿದಾಯ

Uttara Kannada - Subash Hegde

ಕಾರವಾರ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರತ ಸೈನಿಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಹರಿಯಾಣದಲ್ಲಿ ನಡೆದಿದೆ. ಕಾರವಾರ ಕೋಡಿಬಾಗ ನದಿವಾಡದ ವಿಜಯ ವಿಠೋಬಾ ತಾಮ್ಸೆ(44) ಮೃತರು. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನಂದನಗದ್ದಾ ರುದ್ರಭೂಮಿಯಲ್ಲಿ ನಡೆಯಿತು.

ಹರಿಯಾಣದ ಅಂಬಾಲಾದ ಇಎಂಇ ವಿಭಾಗದಲ್ಲಿ ಅವರು ನೌಸ್ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಕ್ಯಾಂಪ್‌ನಲ್ಲಿ ಪಥ ಸಂಚಲನ ನಡೆಸುವಾಗ ಅವರು ಕುಸಿದು ಬಿದ್ದಿದ್ದರು ಎಂದು ಕುಟುಂಬಸ್ಥರಿಗೆ ಸೇನೆಯಿಂದ ಮಾಹಿತಿ ನೀಡಲಾಗಿದೆ.

ಗುರುವಾರ ಬೆಳಗ್ಗೆ ಮೆರವಣಿಗೆಯಲ್ಲಿ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ದು ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.

ಕೋಡಿಬಾಗ ನದಿವಾಡದ ಅವರ ಮನೆಯಿಂದ ನಂದನಗದ್ದಾ ಹಿಂದು ರುದ್ರಭೂಮಿಯವರೆಗೆ ಮೆರವಣಿಗೆ ನಡೆಸಲಾಯಿತು. ಭಾರತೀಯ ನೌಕಾ ಸೇನೆಯ ಬ್ಯಾಂಡ್‌ನ ಜತೆ ಸೇನೆ ಹಾಗೂ ನೌಕಾಸೇನೆಯ ಜವಾನರು ಪಾಲ್ಗೊಂಡಿದ್ದರು. ಶಾಸಕ ಸತೀಶ ಸೈಲ್ ಹಾಗೂ ನೂರಾರು ಜನ ಪಾಲ್ಗೊಂಡಿದ್ದರು.

ವಿಜಯ ತಾಮ್ಸೆ ಅವರು 19 ವರ್ಷದವರಿದ್ದಾಗ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಕಡವಾಡದಲ್ಲಿ ಜಾಗ ಖರೀದಿಸಿದ್ದ ಅವರು ಮನೆ ಕಟ್ಟಲು ಸಿದ್ಧತೆ ನಡೆಸಿದ್ದರು. ಮೇ ನಂತರ ಎರಡು ತಿಂಗಳು ರಜೆ ಪಡೆದು, ಊರಿಗೆ ಬರುವವರಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.