ಜಿಲ್ಲೆ

ಕಬ್ಬಿಣ ಬೇರ್ಪಡಿಸಿ ಮಾರಾಟ!

ಪ್ರಸಿನ್ ಕೆ.ಆರ್

ಆರ್.ಬಿ.ಹಳ್ಳಿ ದಿವಾಕರ್ ಮಳವಳ್ಳಿ
ತಾಲೂಕಿನ ಗಡಿ ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ದುರಸ್ತಿಗೊಳಿಸಿ ತೆರುವುಗೊಳಿಸಿರುವ ಹಳೆಯ ಸೇತುವೆ ಸ್ಲಾೃಬ್‌ಗಳಿಂದ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಲಕ್ಷಾಂತ ರೂ. ಬೆಲೆ ಬಾಳುವ ಕಬ್ಬಿಣವನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದಾರೆ.

ಕೊಳ್ಳೇಗಾಲ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟಿಯ ಹೆದ್ದಾರಿ 209ಕ್ಕೆ 1932ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸುಮಾರು 500 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ಕೆಲಭಾಗದಲ್ಲಿ ಗುಂಡಿಗಳು ಉಂಟಾಗಿ ಶಿಥಿಲಗೊಂಡ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಹೆದ್ದಾರಿ ಪ್ರಾಧಿಕಾರದ ವಿಶೇಷ ಅನುದಾನದಲ್ಲಿ ಸೇತುವೆ ಪಿಲ್ಲರ್ ಹೊರತುಪಡಿಸಿ ಮೇಲ್ಭಾಗ ನೂತನವಾಗಿ ಸ್ಲಾೃಬ್‌ಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲಾಗಿತ್ತು.

ಸೇತುವೆ ದುರಸ್ತಿ ನಿರ್ವಹಣೆಯ ಜವಬ್ದಾರಿ ಹೊತ್ತ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೆರವುಗೊಳಿಸಿದ ಹಳೆಯ ಸೇತುವೆಯ ಸ್ಲಾೃಬ್‌ಗಳನ್ನು ಸತ್ತೇಗಾಲ ಕಾವೇರಿ ನದಿ ದಡ ಹಾಗೂ ತಾಲೂಕಿನ ಗಡಿಭಾಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿತ್ತು. ಈ ಸ್ಲಾೃಬ್‌ಗಳಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣಗಳನ್ನು ಯಾವುದೇ ಅನುಮತಿ ಇಲ್ಲದೆ ಬೇರ್ರಡಿಸಿ ಮಾರಾಟ ಮಾಡಲು ಅಪರಿಚಿತ ವ್ಯಕ್ತಿಗಳು ಮುಂದಾಗಿದ್ದಾರೆ.

ಸಾರ್ವಜನಿಕ ಆಸ್ತಿಯಾದ ಸೇತುವೆಯ ಅವಶೇಷಗಳನ್ನು ಬೇರ್ಪಡಿಸಿ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣ ವಸ್ತುಗಳನ್ನು ಮಾರಾಟ ಮಾಡಲು ಖಾಸಗಿ ವ್ಯಕ್ತಿಗಳು ಮುಂದಾಗಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗನ್ನು ಹುಟ್ಟುಹಾಕಿದೆ.

ನಿಯಮದ ಪ್ರಕಾರ ಸಂಬಂಧಿತ ಇಲಾಖೆ ಅಧಿಕಾರಿಗಳು ಟೆಂಡರ್ ಅಥವಾ ಮೇಲಾಧಿಕಾರಿಗಳಿಗೆ ಪತ್ರವ್ಯವಹಾರ ನಡೆಸಿ ನೋಂದಾಯಿತ ಗುತ್ತಿಗೆದಾರರಿಗೆ ವಿಲೇವಾರಿಗೆ ಅವಕಾಶ ಕಲ್ಪಿಸಬೇಕಿತ್ತು. ಆದರೆ, ಸಂಬಂಧಿಸಿದ ಇಲಾಖೆ ಈ ಯಾವುದೇ ಪ್ರಕ್ರಿಯೆ ನಡೆಸದೆ ನಿರ್ಲಕ್ಷೃವಹಿಸಿರುವುದು ಕೂಡ ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಸೇತುವೆ ಅವಶೇಷಗಳನ್ನು ಸದ್ಯ ಅಪರಿಚಿತ ವ್ಯಕ್ತಿಗಳು ಯಾವುದೇ ಅನುಮತಿ ಪಡೆಯದೆ ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕರ ಮೂಲಕ ಜೆಸಿಬಿ ಯಂತ್ರ ಬಳಸಿ ಬೇರ್ಪಡಿಸಿ ಕಬ್ಬಿಣವನ್ನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ ರೂ. ಖಾಸಗಿಯವರ ಪಾಲಾಗುತ್ತಿದೆ.
ನೂತನ ಸೇತುವೆ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿ ಹಾಗೂ ಇಂಜಿನಿಯರ್ ಅಕ್ರಮದಲ್ಲಿ ಪಾಲುದಾರರಾಗಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಈ ಕುರಿತು ಕಾರ್ಮಿಕರನ್ನು ಪ್ರಶ್ನಿಸಿ ಅನುಮಾನಗೊಂಡು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.