ಜಿಲ್ಲೆ

ಸೌರ ವಿದ್ಯುತ್​ ಉತ್ಪಾದನೆ ಆರ್ಥಿಕ ಅಭಿವೃದ್ಧಿಗೆ ಪೂರಕ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸೌರ ವಿದ್ಯುತ್​ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ ಎಂದು ಗ್ರೀನ್​ ಲ್ಯಾಂಡ್​ ಬಯೋಟೆಕ್​ ಸಿಇಒ ಬಾಲಚಂದ್ರ ಜಾಬಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸೌರ ವಿದ್ಯುತ್​ ಉತ್ಪಾದನಾ ಅವಕಾಶಗಳು ಹಾಗೂ ಸಬ್ಸಿಡಿ ಲಭ್ಯತೆ ಕುರಿತು ಅವರು ಮಾತನಾಡಿದರು.

ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ, ಒಬ್ಬನೇ ಸೂರ್ಯ, ಒಂದೇ ವಿದ್ಯುತ್​ ಗ್ರಿಡ್​ ಪರಿಕಲ್ಪನೆ ಮತ್ತು ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್​ ಉತ್ಪಾದನೆಯೆಡೆಗೆ ಪರಸ್ಪರ ಕೈ ಜೋಡಿಸುತ್ತಿರುವುದು ಒಳ್ಳೆ ಬೆಳವಣಿಗೆ. ಮುಂದಿನ ದಿನಗಳಲ್ಲಿ ಜಗತ್ತನ್ನು ಆಳುವ ಶಕ್ತಿಯಾಗಿ ಸೋಲಾರ್​ ಎನರ್ಜಿ ಬರಲಿದೆ ಎಂದರು.

ಸೌರ ವಿದ್ಯುತ್​ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಜೆಎಸ್​ಎಸ್​ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ. ಟಿ.ಎಂ. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಬಿ.ಎಲ್​. ಪಾಟೀಲ, ಟಿ.ಎಸ್​. ಕ್ವಾಟಿಹಳ್ಳಿ, ಶಿವಲಿಂಗಪ್ಪ ಮಾಸ್ತಮರಡಿ, ಮಹಾಂತೇಶ ನರೇಗಲ್​, ಮಧುಮತಿ ಸಣಕಲ್​, ಬಸವರಾಜ ಕಪಲಿ, ಇತರರು ಇದ್ದರು.

ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ನವೀನಶಾಸ್ತ್ರಿ ಪುರಾಣಿಕ ವಂದಿಸಿದರು.