ಹೊಸದುರ್ಗ: ಬೆಸ್ಕಾಂ ವ್ಯಾಪ್ತಿಯಲ್ಲಿರುವ 154 ವಿದ್ಯುತ್ ಉಪ ವಿತರಣಾ ಕೇಂದ್ರಗಳಲ್ಲಿ ಪಿಎಂ ಕುಸುಮ್‌ಸಿ ಯೋಜನೆಯಡಿ 1081 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಮೂಲಕ ಸೌರೀಕರಣ ಮಾಡಲಾಗುತ್ತಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹೇಳಿದರು.
ತಾಲೂಕಿನ ಕಂಚಿಪುರ ಮತ್ತು ನೀರಗುಂದ ಗ್ರಾಮಗಳ ಬಳಿ ನಿರ್ಮಾಣವಾಗುತ್ತಿರುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಗುರುವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಒತ್ತಾಸೆಯಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಒದಗಿಸುವ ಉದ್ದೇಶದಿಂದ ಸೌರ ವಿದ್ಯುತ್ ತಯಾರಿಕೆ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿತ್ತು ಎಂದರು.
750 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಅಂಗೀಕರಿಸಿ ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಲಾಗಿದೆ. ಉಳಿದ 331 ಮೆಗಾವ್ಯಾಟ್ ವಿದ್ಯುತ್ ತಯಾರಿಕೆಗೆ ಮರು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಸೌರ ಘಟಕಗಳಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಹತ್ತಿರದ ವಿತರಣಾ ಕೇಂದ್ರಗಳಿಗೆ ಪೂರೈಸಿ ಹಗಲು ವೇಳೆಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪವರ್ ನೀಡಲಾಗುವುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೃಷಿಕರ ಸಂಕಷ್ಟವನ್ನು ದೂರ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದು ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.
ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ 88 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಮೆಘಾ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ ಕಂಚೀಪುರ ಹಾಗೂ ನೀರಗುಂದ ಬಳಿ ಸೋಲಾರ್ ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.
ಕಂಚೀಪುರದ 5.4 ಮೆಗಾವ್ಯಾಟ್ ಸಾಮರ್ಥ್ಯದ ಘಟಕಕ್ಕಾಗಿ 27 ಎಕರೆ ಹಾಗೂ ನೀರಗುಂದ ಬಳಿ 3.1 ಮೆಗಾವ್ಯಾಟ್ ಘಟಕದ ನಿರ್ಮಾಣಕ್ಕಾಗಿ 12 ಎಕರೆ ಸರ್ಕಾರಿ ಜಮೀನು ನೀಡಲಾಗಿದೆ. 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ವಿದ್ಯುತ್ ಉತ್ಪಾದನೆಯಾಗುವ ವಿಶ್ವಾಸವಿದೆ ಎಂದರು.
ಬೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಜಯಣ್ಣ ಮಾತನಾಡಿ, ಕಂಚೀಪುರ ವಿದ್ಯುತ್ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ 8 ಫೀಡರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
2100 ಕೃಷಿ ಪಂಪ್‌ಸೆಟ್‌ಗಳಿವೆ. ಸೌರ ವಿದ್ಯುತ್ ಘಟಕದಲ್ಲಿ ಉತ್ಪಾದನೆಯಾಗುವ 5.4 ಮೆಗಾವ್ಯಾಟ್ ವಿದ್ಯುತ್ ಅನ್ನು ಹಗಲು ವೇಳೆಯಲ್ಲಿ ಎರಡು ಹಂತದಲ್ಲಿ ರೈತರ ಪಂಪ್ ಸೆಟ್‌ಗಳಿಗೆ ನೀಡಲಾಗುವುದು. 25 ವರ್ಷಗಳ ಕಾಲ ಸೌರ ವಿದ್ಯುತ್ ಘಟಕ ಕಾರ್ಯನಿರ್ವಹಿಸಲಿದೆ ಎಂದರು.