ವಿಜಯವಾಣಿ ಸುದ್ದಿಜಾಲ ಕುಂದಾಣ
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಡೆಗಟ್ಟಲು ಸೋಲಾರ್ ಲೈಟ್‌ಗಳನ್ನು ವಿತರಿಸುತ್ತಿದ್ದು, ಬಡವರು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್ ಹೇಳಿದರು.
ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮ ಪಂಚಾಯಿತಿ ಸಮೀಪ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಅನುದಾನಯಲ್ಲಿ ಅಂಗವಿಕಲರಿಗೆ ಸೋಲಾರ್ ಲೈಟ್‌ಗಳನ್ನು ವಿತರಿಸಿ ಮಾತನಾಡಿದರು. ಸೋಲಾರ್ ಲೈಟ್ ಪರಿಸರ ಸ್ನೇಹಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದರು,. ಗ್ರಾಪಂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದ್ದು, ರಸ್ತೆ, ಚರಂಡಿ, ವಾಣಿಜ್ಯ ಕಟ್ಟಡಗಳನ್ನು ಒಳಗೊಂಡಂತೆ ನೂತನ ಗ್ರಾಪಂ ಕಟ್ಟಡವನ್ನು ನಿರ್ಮಿಸುವ ಹಂಬಲವಿದೆ. ಗ್ರಾಪಂ ಸರ್ವ ಸದಸ್ಯರು ತೆರಿಗೆಯ ಆದಾಯ ಮೂಲದ ಜತೆಗೆ ಕ್ಷೇತ್ರದ ಶಾಸಕರೂ ಆದ ಸಚಿವ ಕೆ.ಎಚ್.ಮುನಿಯಪ್ಪ ಅವರ ವಿವೇಚನಾ ಅನುದಾನಕ್ಕೆ ಮನವಿ ಮಾಡಿ, ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕುಂದಾಣ ಗ್ರಾಪಂ ಸದಸ್ಯ ಪ್ರವೀಣ್ ಮಾತನಾಡಿ, ಗ್ರಾಪಂ ವಾಣಿಜ್ಯ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಹತ್ತಾರು ವರ್ಷಗಳು ಕಳೆದಿದೆ. ಅದರ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ವರದಿ ತರಿಸಿಕೊಂಡ ನಂತರ ಸುಸಜ್ಜಿತ ವಾಣಿಜ್ಯ ಮಳಿಗೆ ಕಟ್ಟಡಗಳನ್ನು ನಿರ್ಮಿಸಿದ್ದಲ್ಲಿ ಆದಾಯ ಹೆಚ್ಚಲಿದೆ. ಮುಂಬರುವ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.
ಅಧ್ಯಕ್ಷೆ ನೇತ್ರಾ ನಾಗೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಬಹಳಷ್ಟು ಒತ್ತು ನೀಡುತಿದ್ದೇವೆ. ಅಭಿವೃದ್ಧಿ ಸಂಬಂಧ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು, ಭಿನ್ನಾಭಿಪ್ರಾಯಕ್ಕೆ ಅವಕಾಶ ಕಲ್ಪಿಸದೆ, ಎಲ್ಲ ಗ್ರಾಮಗಳ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.