ಕೋಲಾರ: ಜಿಲ್ಲೆಯ ಮಾಲೂರು, ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಕಾಡಾನೆಗಳ ಹಾವಳಿ ತಡೆಯಲು ಸೋಲಾರ್ ಫೆನ್ಸಿಂಗ್ ಅಳವಡಿಕೆಗೆ ಪ್ರಯತ್ನ ನಡೆದಿದೆ ಎಂದು ಕೋಲಾರ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ತಿಳಿಸಿದ್ದಾರೆ.
ತಮಿಳುನಾಡಿನ ಹೊಸೂರು ಕಡೆಯಿಂದ ಕಾಡಾನೆಗಳು ಜಿಲ್ಲೆಯ ಗಡಿಭಾಗಕ್ಕೆ ನುಸುಳಿರುವ ಕುರಿತು ಶುಕ್ರವಾರ ವಿಜಯವಾಣಿಯೊಂದಿಗೆ ಮಾತನಾಡಿ, ಕಾಡಾನೆಗಳ ದಾಳಿಯಿಂದ ಬೆಳೆ ನಾಶವಾಗುತ್ತಿದೆ, ಆನೆಯನ್ನು ನೋಡಲು ಹೋದ ರೈತರೂ ಸಾವನ್ನಪ್ಪಿದ್ದಾರೆ, ಆನೆಗಳ ಉಪಟಳ ನಿಗ್ರಹಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಲು ಗ್ರಾಮಸ್ಥರ ಸಹಕಾರ ಪಡೆಯಲಾಗುವುದು ಎಂದರು.
ಸೋಲಾರ್ ಫೆನ್ಸಿಂಗ್ ಅಳವಡಿಸಲು ತಜ್ಞರಿಂದ ಮಾಹಿತಿ ಪಡೆದು ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಿ ಅನುದಾನ ಪಡೆಯಲಾಗುವುದು, ಗ್ರಾಮಸ್ಥರು ಸಹಭಾಗಿತ್ವ ನೀಡಿದಲ್ಲಿ ಅವರ ಜಮೀನು ರಕ್ಷಣೆಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರೈತರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದೆರಡು ತಿಂಗಳ ಹಿಂದೆ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ನಮ್ಮ ಇಲಾಖೆ ಸಿಬ್ಬಂದಿ ತಮಿಳು ನಾಡಿಗೆ ವಾಪಸ್ ಅಟ್ಟಿದ್ದರು. ನೀರು, ಆಹಾರಕ್ಕಾಗಿ ಮತ್ತೆ ಗಡಿ ದಾಟಿವೆ, ಆನೆಗಳ ಹಾವಳಿ ತಡೆಗೆ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೂ ಸವಾಲೊಚನೆ ನಡೆಸಲಾಗಿದ್ದು, ಅವರೂ ಸೋಲಾರ್ ಫೆನ್ಸಿಂಗ್ ಅಳವಡಿಕೆಗೆ ಕೈಜೋಡಿಸಿದರೆ ರೈತರಿಂದ ಸಹಾಯ ಪಡೆಯುವ ಪ್ರಮೇಯ ಉಂಟಾಗದು ಎಂದರು.
ಚಿರತೆ ಹಾವಳಿ ತಡೆಗೂ ಕ್ರಮ: ತಾಲೂಕಿನ ನರಸಾಪುರ ಬಳಿಯ ಕುರ್ಕಿ ಬೆಟ್ಟದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿರುವ ಮಾಹಿತಿ ಲಭ್ಯವಾಗಿದ್ದು, ಜನ ಮತ್ತು ಜಾನುವಾರುಗಳಿಗೆ ಹಾನಿಯಾಗದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಅಂತರಗಂಗೆ ಬೆಟ್ಟವನ್ನು ಎಬಿಸಿ ಬ್ಲಾಕ್‌ಗಳನ್ನಾಗಿ ಗುರುತಿಸಲಾಗಿದೆ, ನಾಗನಾಳ, ಮಡೇರಹಳ್ಳಿ, ಅರಾಭಿಕೊತ್ತನೂರು ಇನ್ನಿತರೆಡೆ ಚಿರತೆಗಳಿವೆ ಎಂಬ ದೂರಿನಡಿ ಸೆರೆ ಹಿಡಿಯಲು ಬೋನುಗಳ ವ್ಯವಸ್ಥೆ ವಾಡಲಾಗಿದೆ. ಆದರೂ ನರಸಾಪುರ ಬಳಿಯ ಕುರ್ಕಿಯಲ್ಲಿ ಚಿರತೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ನಮ್ಮ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.
ಗ್ರಾಮಸ್ಥರು ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಸುರಕ್ಷತೆ ಇಲ್ಲದೆ ಹೋಗಬಾರದು, ಮನೆಗಳ ಮುಂದೆ ಜಾನುವಾರುಗಳನ್ನು ಕಟ್ಟಿ ಹಾಕುವ ಬದಲು ದನದ ಕೊಟ್ಟಿಗೆಯಲ್ಲಿ ಬಿಡಬೇಕು, ಚಿರತೆ ಕಾಣಿಸಿದ ಕೂಡಲೇ ನಮ್ಮ ಸಿಬ್ಬಂದಿಗೆ ತಿಳಿಸಿದರೆ ಗ್ರಾಮಸ್ಥರ ರಕ್ಷಣೆಗೆ ಧಾವಿಸುತ್ತಾರೆ ಎಂದು ಹೇಳಿದರು.
ಫೆನ್ಸಿಂಗ್ ಹೇಗಿರುತ್ತದೆ: ಆನೆ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಈ ಮುಂಚೆ ರೈಲ್ವೆ ಕಂಬಿ ಬಳಿಸಿ ತಡೆ ಬೇಲಿ ನಿರ್ಮಿಸಲು ಯೋಚಿಸಿತ್ತು. ಆದರೆ ಯೋಜನೆ ಜಾರಿಗೆ ಕೋಟಿಗಟ್ಟಲೆ ಹಣ ಬೇಕಾಗುವುದರಿಂದ ಅನುದಾನ ಒದಗಿಸಲಾಗದೆ ಯೋಜನೆ ಕೈ ಬಿಟ್ಟಿದೆ. ಇನ್ನು ತಮಿಳುನಾಡಿನ ರೀತಿಯಲ್ಲಿ ಕಾಡುಗಳ ಗಡಿಯಲ್ಲಿ ವಿದ್ಯುತ್ ಬೇಲಿ ನಿರ್ವಾಣಕ್ಕೂ ಚಿಂತಿಸಿ ಅದೂ ಆನೆ ಮತ್ತು ಜನರ ಸುರಕ್ಷತೆ ದೃಷ್ಟಿಯಿಂದ ಕಷ್ಟವೆಂದು ಈಗ ಸೋಲಾರ್ ವಿದ್ಯುತ್ ಬಳಕೆ ವಾಡಿ ಆನೆಗಳಿಗೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದೆ. ಆನೆಗಳು ನುಸುಳುವ ಗಡಿಭಾಗದಲ್ಲಿ ಸೋಲಾರ್ ವಿದ್ಯುತ್ ಕಂಬಳನ್ನು ನೆಟ್ಟು ಅಗತ್ಯವಿರುವಷ್ಟು ಪ್ರದೇಶಕ್ಕೆ ಮುಳ್ಳು ತಂತಿಗಳನ್ನು ಅಳವಡಿಸಿ ಅದಕ್ಕೆ ಸೋಲಾರ್ ವಿದ್ಯುತ್ ಪ್ರಸರಿಸಿ ಆನೆಗಳು ನಾಡಿಗೆ ನುಸಳದಂತೆ ವಾಡುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ಇಲಾಖೆಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂಬುದು ವಾದ, ಈಗಾಗಲೆ ಕೇರಳ ಸೇರಿ ಇನ್ನಿತರ ರಾಜ್ಯಗಳಲ್ಲಿ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದು ಆನೆಗಳ ಹಾವಳಿ ತಪ್ಪಿಸುವ ಜತೆಗೆ ಕಾಡುಗಳ್ಳರ ಹಿಡಿಯಲು ಸಿಬ್ಬಂದಿಗೆ ಅನುಕೂಲವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.