ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮಾನ್ಸೂನ್ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಬಿತ್ತನೆಗೆ ಅತ್ಯಂತ ಸೂಕ್ತ ವಾತಾವರಣ ನಿಮಿರ್ಸಿದೆ. ಕಳೆದ ಎರಡ್ಮೂರು ವರ್ಷ ಸರಿಯಾಗಿ ಮಳೆ ಇಲ್ಲದೇ ತೊಂದರೆ ಅನುಭವಿಸಿರುವ ರೈತರ ಮುಖದಲ್ಲಿ ಪ್ರಸ್ತುತ ಮುಂಗಾರು ಮಂದಹಾಸ ಮೂಡಿಸಿದೆ.
ಈಗಾಗಲೇ ಭೂಮಿ ಹದಗೊಳಿಸಿರುವ ಕೃಷಿಕರು ಮೈಕೊಡವಿಕೊಂಡು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈಗ ಬಿತ್ತನೆ ಚುರುಕು ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾದ ಹೆಸರು, ಸೋಯಾಬೀನ್, ಉದ್ದು, ಗೋವಿನಜೋಳ, ಭತ್ತ, ಹತ್ತಿ ಬಿತ್ತನೆ ಕಾರ್ಯ ಕಂಡು ಬರುತ್ತಿದೆ.
ಜಿಲ್ಲೆಯ ಹುಬ್ಬಳ್ಳಿ, ಧಾರವಾಡ ತಾಲೂಕಿನಲ್ಲಿ ಹೆಸರು, ಸೋಯಾಬೀನ್ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದರೆ, ನವಲಗುಂದ, ಕಲಟಗಿ ಭಾಗದಲ್ಲಿ ಹತ್ತಿ, ಗೋವಿನ ಜೋಳಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ. ಕೆಲವೆಡೆ ಶೇಂಗಾ ಬಿತ್ತನೆಯೂ ನಡೆದಿದೆ. ಅಲ್ಲದೇ ಕಲಘಟಗಿ ಭಾಗದಲ್ಲಿ ಹತ್ತಿಗೆ ಆದ್ಯತೆ ನೀಡಿದ್ದಾರೆ.
ಉಳಿದಂತೆ ಈರುಳ್ಳಿ, ಮೆಣಸಿನಕಾಯಿ ಬಿತ್ತನೆಗೆ ಕೆಲವೇ ದಿನಗಳಲ್ಲಿ ರೈತರು ಅಣಿಯಾಗಲಿದ್ದಾರೆ. ಹಾಗೆ ನೋಡಿದರೆ ಮೇ ಕೊನೇ ವಾರದಿಂದಲೇ ಕೆಲವರು ಬಿತ್ತನೆ ಆರಂಭಿಸಿದ್ದಾರೆ. ಜೂನ್ನಲ್ಲಿ ಮಳೆ ಬಾರದೇ ಇದ್ದರೆ ಏನು ಮಾಡುವುದು? ಎಂಬ ಆತಂಕವೂ ಇತ್ತು. ಆದರೆ, ಅದೆಲ್ಲಕ್ಕೂ ಅವಕಾಶ ಕೊಡದಂತೆ ಮಳೆ ಸುರಿಯುತ್ತಿದೆ. ಜೂನ್ನಲ್ಲಿ ಭರ್ಜರಿ ಮಳೆ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ರೈತರು ಖುಷಿಯಲ್ಲೇ ಬಿತ್ತನೆಗೆ ಚುರುಕು ನೀಡಿದ್ದಾರೆ.
ಕೆಲವೆಡೆ ಹೆಚ್ಚಿನ ಮಳೆಯಾಗಿ ಹೆಚ್ಚು ಆರ್ದ್ರತೆ ಇರುವುದರಿಂದ ಬಿತ್ತನೆ ಕಾರ್ಯ ಮುಂದೂಡಿದ್ದಾರೆ. ಈಗಾಗಲೇ ಶೇ. 40ರಷ್ಟು ಬಿತ್ತನೆ ಆಗಿದೆ. ಉಳಿದ ಕ್ಷೇತ್ರದ ಬಿತ್ತನೆ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಬಿತ್ತನೆ ಗುರಿ:
ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2,70,840 ಹೆಕ್ಟೇರ್ ಬಿತ್ತನೆ ಗುರಿ ಇದೆ. ಪ್ರಮುಖವಾಗಿ ಹೆಸರು ಹೆಚ್ಚಿನ ಪ್ರದೇಶವನ್ನು ಆವರಿಸುವ ಸಾಧ್ಯತೆ ಇದೆ. 67,150 ಹೆಕ್ಟೇರ್, ಹತ್ತಿ 59 ಸಾವಿರ ಹೆ, ಗೋವಿನಜೋಳ 57,175 ಹೆ, ಸೋಯಾಬೀನ್ 33,100 ಹೆ, ಶೇಂಗಾ 25 ಸಾವಿರ ಹೆ, ಉದ್ದು 7,350 ಹೆ ಹಾಗೂ ಭತ್ತ 11,522 ಹೆ ಬಿತ್ತನೆಯಾಗುವ ನಿರೀಕ್ಷೆ ಇದೆ. ಬಿತ್ತನೆ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ ಮತ್ತು ವಿತರಣೆ ಕೇಂದ್ರಗಳ ಮೂಲಕ ಹಂಚಿಕೆ ಮಾಡಲಾಗುತ್ತಿದೆ.
ರಸಗೊಬ್ಬರ:
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 56,243 ಮೆಟ್ರಿಕ್ ಟನ್ ವಿವಿಧ ಗ್ರೇಡಿನ ರಸಗೊಬ್ಬರಗಳ ಅವಶ್ಯಕತೆ ಇದೆ. ಮೇ- ಅಂತ್ಯದವರೆಗೆ 16,749 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇತ್ತು. ಈ ಪೈಕಿ ಯೂರಿಯಾ, ಡಿಎಪಿ, ಎಂಒಪಿ-, ಕಾಂಪ್ಲೆಕ್ಸ-, ಎಸ್ಎಸ್ಪಿ ಸೇರಿ 14,321 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ.