ವಿಜಯವಾಣಿ ಸುದ್ದಿಜಾಲ ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತಂಗಡಿ ಸಮೀಪದ ಸರ್ವಿಸ್ ರಸ್ತೆ ಬದಿಯಲ್ಲಿ ಮಣ್ಣು ಕೊಚ್ಚಿ ಹೋಗಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಪರಿಶೀಲಿಸುವುದಕ್ಕಾಗಿ ವಿಶೇಷ ಭೂ ಸ್ವಾಧಿನಾಧಿಕಾರಿ ಮಹಮ್ಮದ್ ಇಸಾಕ್, ಕಾರ್ಕಳ ತಹಸೀಲ್ದಾರ್ ಪ್ರದೀಪ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿತು. ಬಳಿಕ ಗುತ್ತಿಗೆದಾರ ಕಂಪನಿಯ ಕನ್‌ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಅವರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು ಮಣ್ಣು ಕೊಚ್ಚಿ ಹೋಗಿರುವ ಭಾಗ ಸಹಿತ ರಸ್ತೆಯಲ್ಲಿ ಪೂರ್ತಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ತಾಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕ ಹರೀಶ್ ಕೆ.ಬಿ., ಕಂದಾಯ ನಿರೀಕ್ಷಕ ಶಿವಪ್ರಸಾದ್, ಸಾಣೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ., ಸಾಣೂರು ಗ್ರಾಮ ಕರಣಿಕ ಸಂಗಮೇಶ್ ತಂಡದಲ್ಲಿದ್ದರು. ತಾತ್ಕಾಲಿಕ ಕಾಮಗಾರಿ: ಅಧಿಕಾರಿಗಳ ಸೂಚನೆ ಮೇರೆಗೆ ಕೂಡಲೇ ಕಾರ್ಯೋನ್ಮುಖರಾದ ಗುತ್ತಿಗೆದಾರ ಕಂಪನಿಯು ಸಣ್ಣ ಜಲ್ಲಿಕಲ್ಲು ಹಾಗೂ ಜಲ್ಲಿಹುಡಿ ಬಳಸಿ ತಾತ್ಕಾಲಿಕ ಸುರಕ್ಷತಾ ಕ್ರಮಕೈಗೊಂಡಿದೆ.
ಅಧಿಕಾರಿಗಳು ಪರಿಶೀಲಿಸಿದ ಬಳಿಕ ತುರ್ತಾಗಿ ಅಗತ್ಯವಿರುವ ಕಡೆಗಳಲ್ಲಿ ಜಲ್ಲಿಕಲ್ಲು ಹಾಗೂ ಜಲ್ಲಿಹುಡಿ ಸುರಿದು ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ. ಆದರೆ ಸುರಿದ ಮಳೆಗೆ ಎಲ್ಲವೂ ಕೊಚ್ಚಿ ಹೋಗಿ ಹಿಂದಿನ ದುಸ್ಥಿತಿಯೇ ಮರುಕಳಿಸಿದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ. -ಸಾಣೂರು ನರಸಿಂಹ ಕಾಮತ್, ಹೆದ್ದಾರಿ ಹೋರಾಟ ಸಮಿತಿ ಪ್ರಮುಖ https://www.vijayavani.net/increased-demand-for-kallanbe-in-the-market https://www.vijayavani.net/training-for-members-of-the-advisory-committee-of-the-knowledge-center