ರಾಯಚೂರು: ಕೃಷಿ ಉತ್ಪಾದನೆಯೂ ಸುಸ್ಥಿರವಾಗಬೇಕಾದರೆ ಮಣ್ಣಿನ ಪಾತ್ರ ಪ್ರಮುಖವಾಗಿದ್ದು, ಸಸ್ಯಗಳಿಗೆ ಬೇಕಾದ ಪೋಷಕಾಂಶ ಒದಗಿಸುವ ಜೀವಂತ ವಸ್ತು, ಸಕಲ ಜೀವಿಗಳಿಗೆ ಆಧಾರಸ್ತಂಭ ಮಣ್ಣು ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿ, ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಜಿಲ್ಲಾ ಕೃಷಿಕ ಸಮಾಜದಿಂದ ಬುಧವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಣ್ಣಿನ ಪ್ರಮುಖ ಗುಣಧರ್ಮಗಳಾದ ಭೌತಿಕ, ರಸಾಯನಿಕ ಹಾಘೂ ಜೈವಿಕ ಗುಣಧರ್ಮಗಳು ಸಸ್ಯಗಳ ಬೆಳವಣಿಗೆಗೆ ಸೂಕ್ತವಾಗಿರಬೇಕು ಎಂದರು.
ಕ್ಷೀಣಿಸುತ್ತಿರುವ ಸಾವಯವ ಇಂಗಾಲದ ಪ್ರಮಾಣವನ್ನು ಮಣ್ಣಿನಲ್ಲಿ ಹೆಚ್ಚಿಸಲು ರೈತರು ವಿವಿಧ ಕ್ರಮ ಅನುಸರಿಸಬೇಕು. ಪ್ರತಿ 3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಿ ಅದಕ್ಕೆ ಅನುಗುಣವಾಗಿ ರಸಗೊಬ್ಬರ ಒದಗಿಸಬೇಕು. ರೈತರು ಕೃಷಿ ಜತೆಗೆ ಉಪ ಕಸುಬು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ಎಂ.ಎ.ಬಸವಣೆಪ್ಪ ಮಾತನಾಡಿ, ಮಣ್ಣಿನ ಆರೋಗ್ಯ ಕಾಪಾಸಲು ಸಾವಯವ ಕೃಷಿ ಅವಶ್ಯಕವಾಗಿದೆ. ಮಣ್ಣು ಮತ್ತು ನೀರು ಪ್ರತಿ ಜೀವಿಯ ಪ್ರಮುಖ ಅಂಗಗಳಾಗಿವೆ. ಕಲುಷಿತ ಆಹಾರ ಮತ್ತು ವಾತಾವರಣದಿಂದ ಕ್ಯಾನ್ಸರ್ ಮತ್ತು ಚರ್ಮವ್ಯಾಗಳು ಉಲ್ಭಣವಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ ಮಾತನಾಡಿ, ಲವತ್ತಾದ 10 ಸೆಂ.ಮೀ. ಮಣ್ಣು ತಯಾರಾಗಲು ಸಾವಿರ ವರ್ಷಗಳು ಬೇಕು. ಮಣ್ಣು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಬಳುವಳಿಯಾಗಿ ಬಂದಂತಹ ಭೂಮಿಯನ್ನು ಮುಂದಿನ ಜನಾಂಗಕ್ಕೆ ಆರೋಗ್ಯಯುತವಾಗಿ ಹಸ್ತಾಂತರಿಸುವುದು ಅವಶ್ಯಕತೆಯಿದೆ.
ಪ್ರತಿಯೊಂದು ಜೀವಿ ಜೀವಿಸಲು ಮಣ್ಣಿನ ಸಂರಕ್ಷಣೆ ಅಗತ್ಯವಿದ್ದು, ಈ ಕುರಿತು ನಿರಂತರ ಚರ್ಚೆಯಾಗಿ ಆಂದೋಲನ ರೂಪ ಪಡೆದಾಗ ಮಾತ್ರ ಆರೋಗ್ಯವಂತ ಭೂಮಿ, ಸತ್ವಯುತವಾದ ಬೆಳೆ ಹಾಗೂ ಆರೋಗ್ಯವಂತ ಜನಾಂಗ ಹೊಂದಲು ಸಾಧ್ಯ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಿದ್ದಾರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎನ್.ಭಟ್, ಪ್ರಾಧ್ಯಾಪಕರಾದ ಡಾ.ಕೆ.ನಾರಾಯಣರಾವ್, ಡಾ.ಮಹಾದೇವಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಡಾ.ದೀಪಾ ಕುಲಕರ್ಣಿ, ವಿಜ್ಞಾನಿಗಳಾದ ಡಾ.ಕೆ.ಜೆ.ಹೇಮಲತಾ, ಡಾ.ಜಿ.ಎನ್.ಶ್ರೀವಾಣಿ ಉಪಸ್ಥಿತರಿದ್ದರು.