ಜಿಲ್ಲೆ

ವೃದ್ಧ ರೈತರ ಬೆರಳಚ್ಚು ಸ್ವೀಕರಿಸದ ತಂತ್ರಾಂಶ

ವಿವೇಕಾನಂದ ದಾಸನಕೊಪ್ಪ

ಉಪ್ಪಿನಬೆಟಗೇರಿ(ಧಾರವಾಡ): ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೋಯಾಬೀನ್ ಖರೀದಿಗೆ ಸರ್ಕಾರ ಮುಂದಾಗಿದೆ. ಆದರೆ, ನೋಂದಣಿಗೆ ರೈತರ ಬೆರಳಚ್ಚು ಕಡ್ಡಾಯ ಮಾಡಿರುವುದೇ ಸಮಸ್ಯೆಯಾಗಿದೆ.

ಈ ಮೊದಲು ಖರೀದಿ ಕೇಂದ್ರದಲ್ಲಿ ಕಾಳು ಮಾರಾಟ ಮಾಡುವ ರೈತರು ತಮ್ಮ ಹೊಲದ ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಎಫ್‌ಐಡಿ ಪಡೆದು ನೋಂದಣಿ ಮಾಡಲಾಗುತ್ತಿತ್ತು. ಈ ಬಾರಿ ಪಹಣಿ ಪತ್ರದಲ್ಲಿ ಹೆಸರಿರುವ ರೈತರೇ ಕಡ್ಡಾಯವಾಗಿ ಖರೀದಿ ಕೇಂದ್ರಕ್ಕೆ ಬಂದು ಬೆರಳಚ್ಚು ನೀಡಿ ನೋಂದಣಿ ಮಾಡಿಸಬೇಕೆಂಬ ನೂತನ ನಿಯಮವನ್ನು ಸರ್ಕಾರ ಮಾಡಿದೆ. ಇದರಿಂದ ಸಾಕಷ್ಟು ರೈತರಿಗೆ ತೊಂದರೆಯಾಗುವ ಜತೆಗೆ ನೋಂದಣಿ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ವಯಸ್ಕ ರೈತರು ಬೆರಳಚ್ಚನ್ನು ಸರಳವಾಗಿ ಸ್ವೀಕರಿಸುವ ತಂತ್ರಾಂಶ, ವೃದ್ಧರಾದವರ ಬೆರಳಚ್ಚನ್ನು ಸರಳವಾಗಿ ಸೆರೆ ಹಿಡಿಯುತ್ತಿಲ್ಲ. ಹೀಗಾಗಿ, ಸಾಫ್ಟ್‌ವೇರ್‌ನಲ್ಲಿ ರೈತರು ಹೆಸರು ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ಪಹಣಿಗಳಲ್ಲಿ ಹೆಸರಿರುವ ವೃದ್ಧರಿಗೆ ಪ್ರತಿದಿನ ಖರೀದಿ ಕೇಂದ್ರಕ್ಕೆ ನೋಂದಣಿಗೆ ಅಲೆದಾಡುವುದೇ ದೊಡ್ಡ ಕೆಲಸವಾಗಿದೆ. ಕೃಷಿ ಮಾಡುತ್ತ ಪರಸ್ಥಳದಲ್ಲಿ ವಾಸವಾಗಿರುವವರು, ಉದ್ಯೋಗದಲ್ಲಿರುವವರು ಖುದ್ದಾಗಿ ಬಂದು ಬೆರಳಚ್ಚು ನೀಡಿ ನೋಂದಣಿ ಮಾಡಬೇಕಾದ ಅನಿವಾರ್ಯತೆ ಇದೆ.

ಕಳೆದ ವರ್ಷ ಪ್ರತಿ ರೈತನಿಂದ 15 ಕ್ವಿಂಟಾಲ್ ಕಾಳು ಖರೀದಿಸಿದ್ದ ಸರ್ಕಾರ, ಪ್ರಸ್ತುತ ವರ್ಷ ಎಕರೆಗೆ 2 ಕ್ವಿಂಟಾಲ್ನಂತೆ ಒಟ್ಟು ಐದು ಎಕರೆಗೆ 10 ಕ್ವಿಂಟಾಲ್ ಕಾಳು ಖರೀದಿಸಲು ಅನುಮತಿ ನೀಡಿದೆ. ಫಸಲು ಮಾರಾಟಕ್ಕೆ ಹಲವು ನಿಬಂಧನೆ ಹಾಕುತ್ತಿರುವ ಸರ್ಕಾರದ ಧೋರಣೆಗೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ 500ಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿದ್ದರು. ಆದರೆ, ಈ ಬಾರಿ ಕೇವಲ ನೂರರ ಆಸುಪಾಸು ಮಾತ್ರ ರೈತರ ನೋಂದಣಿಯಾಗಿದೆ.

ಒಟಿಪಿ ಆಧಾರಿತ ವ್ಯವಸ್ಥೆಯಾಗಲಿ: ಸರ್ಕಾರಿ ನೌಕರರು, ಸೇನೆಯಲ್ಲಿರುವ ಹಾಗೂ ಪರಸ್ಥಳದಲ್ಲಿ ವಾಸವಾಗಿರುವ ಸ್ಥಳೀಯ ರೈತರು ಖುದ್ದಾಗಿ ಬಂದು ಬೆರಳಚ್ಚು ನೀಡುವುದು ಕಷ್ಟಕರದ ಸಂಗತಿ. ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಮೊಬೈಲ್ ಒಟಿಪಿ ಪಡೆದು ನೋಂದಣಿ ಮಾಡುವ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಪಹಣಿಯಲ್ಲಿ ನನ್ನದೊಂದೇ ಹೆಸರು ಇರುವುದರಿಂದ ನಾನೇ ಬೆರಳಚ್ಚು ನೀಡಿ, ಹೆಸರು ಮಾರಾಟಕ್ಕೆ ನೋಂದಣಿ ಮಾಡಬೇಕು. ಮೂರು ದಿನದಿಂದ ಖರೀದಿ ಕೇಂದ್ರಕ್ಕೆ ಅಲೆಯುತ್ತಿದ್ದು, ಬೆರಳಚ್ಚು ಸ್ವೀಕೃತವಾಗುತ್ತಿಲ್ಲ. ಹೀಗಾಗಿ, ಹೆಸರು ಕಾಳು ಮಾರಾಟ ಮಾಡುವುದು ದುಸ್ತರವಾಗಿದೆ.ವಸಂತರಾವ್ ಕುಲಕರ್ಣಿ, ಕಲ್ಲೆ ಗ್ರಾಮದ ರೈತ
ರೈತರ ಬೆಳೆದ ಕಾಳು ನೇರವಾಗಿ ಮಾರಾಟ ಮಾಡಲೆಂದು ಮಾರ್ಕೆಟಿಂಗ್ ಇಲಾಖೆ ಬೆರಳಚ್ಚು ಪಡೆದು ನೋಂದಣಿ ಮಾಡಿಕೊಳ್ಳುವ ತಂತ್ರಾಂಶ ಅಳವಡಿಸಿದ್ದಾರೆ. ವೃದ್ಧ ರೈತರ ಬೆರಳಚ್ಚು ಪಡೆಯದ ಬಗ್ಗೆ ಮಾಹಿತಿ ಬಂದಿಲ್ಲ. ಹಾಗೇನಾದರೂ ಇದ್ದರೆ ಆ ಖರೀದಿ ಕೇಂದ್ರದಿಂದ ಮಾಹಿತಿ ಪಡೆದು ಸರಿಪಡಿಸಲಾಗುವುದು. ಖರೀದಿ ಮಿತಿ ಹೆಚ್ಚಿಸಲು ರೈತರು ಮನವಿ ನೀಡಿದರೆ, ಸರ್ಕಾರಕ್ಕೆ ಕಳುಹಿಸಲಾಗುವುದು.ದಿವ್ಯಪ್ರಭು, ಜಿಲ್ಲಾಧಿಕಾರಿ ಧಾರವಾಡ