ಜಿಲ್ಲೆ

ಸಮಾಜಮುಖಿ ಕೆಲಸಕ್ಕೆ ಯುವ ಜನತೆ ಕೈಜೋಡಿಸಲಿ

ಅಶೋಕ್ ಕುಮಾರ್ ಎನ್

ದೇವದುರ್ಗ: ಪ್ರಕೃತಿ ಸಮತೋಲನ ಕಾಪಾಡಿದಾಗ ಜೀವ ಸಂಕುಲ ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲವಾದರೆ ಅವನತಿಯೇ ಗತಿಯಾಗಲಿದೆ ಎಂದು ಹೇಮರಡ್ಡಿ ಮಲ್ಲಮ್ಮ ಸಮಾಜದ ತಾಲೂಕು ಗೌರವ ಅಧ್ಯಕ್ಷ ವೆಂಕಟರಾಯನಗೌಡ ಬೆನಕನ್ ಹೇಳಿದರು.

ಕಕ್ಕಲದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೇಮರಡ್ಡಿ ಮಲ್ಲಮ್ಮ ಸಮಾಜದಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಪ್ರತಿ ವರ್ಷ ವಿಭಿನ್ನ ಸಮಾಜಮುಖಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ವರ್ಷ ಹೋಬಳಿಯ ಎಲ್ಲ ಸರ್ಕಾರಿ ಶಾಲೆಗಳು, ದೇವಸ್ಥಾನಗಳಿಗೆ ಸಸಿ ವಿತರಣೆ ಹಾಗೂ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದಿಂದ ಈ ಹಿಂದೆ ಅರಣ್ಯ ಇಲಾಖೆ ನೆಟ್ಟ ಸಸಿಗಳಿಗೆ ನೀರುಣಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದೀಗ ಸಾಂಕೇತಿಕವಾಗಿ 200 ಸಸಿಗಳ ವಿತರಣೆ ಹಾಗೂ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಜನತೆ ಸಮಾಜಮುಖಿ ಕೆಲಸಕ್ಕೆ ಕೈಜೋಡಿಸಬೇಕು. ಅಂದಾಗ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ವೆಂಕಟರಾಯನಗೌಡ ತಿಳಿಸಿದರು.

ಪ್ರಮುಖರಾದ ಕೊಲ್ಲಪ್ಪ ದೇಸಾಯಿ, ಹನುಮಂತರೆಡ್ಡಿ ವಜ್ಜಲ್, ಮಲ್ಲಿಕಾರ್ಜುನ ಮಲ್ಕಾಪುರ, ಸಿದ್ದನಗೌಡ ಮಾ.ಪಾ., ದೇವಣ್ಣ ಕರ್ಕಿಹಳ್ಳಿ, ಶಿವಣ್ಣ ನಾಯಕ, ಜಂಬಣ್ಣ ಕಬ್ಬೆರ್ ಇದ್ದರು.