ಸೋಮವಾರಪೇಟೆ: ಮಕ್ಕಳು ಪ್ರಶ್ನೆ ಮಾಡಿದರೆ ಸಮಾಜ ಅದನ್ನು ಕೇಳುತ್ತದೆ. ಸಮಸ್ಯೆಗೆ ಸ್ಪಂದಿಸುತ್ತದೆ ಎಂದು ನಾವು ಪ್ರತಿಷ್ಠಾನದ ಸಂಸ್ಥಾಪಕ ಸುಮನಾ ಮ್ಯಾಥ್ಯೂ ಹೇಳಿದರು.
ನಾವು ಪ್ರತಿಷ್ಠಾನದ ವತಿಯಿಂದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ವೆಟರ್ ಮತ್ತು ಛತ್ರಿ ವಿತರಿಸಿ ಮಾತನಾಡಿದರು.
ಚಿಲ್ಡ್ರನ್ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವರ್‌ನೆಸ್, ಪ್ರಕೃತಿ ಫೌಂಡೇಶನ್, ನಾವು ಪ್ರತಿಷ್ಠಾನದ ಸಹಯೋಗದಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಯ ಶ್ರೀನಿಧಿ ಎಂಬ ವಿದ್ಯಾರ್ಥಿ ಮಳೆಗಾಲದಲ್ಲಿ ದೂರದೂರಿನಿಂದ ಶಾಲೆ ಬರಲು ಕಷ್ಟವಾಗುತ್ತಿದೆ. ಚಳಿಯೂ ಹೆಚ್ಚಿರುತ್ತದೆ. ಆದ್ದರಿಂದ ಸ್ವೆಟರ್ ಮತ್ತು ಛತ್ರಿ ವಿತರಿಸುವಂತೆ ಎಂದು ಮನವಿ ಮಾಡಿದ್ದ. ಈ ಬಗ್ಗೆ ನಮ್ಮದೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಎನ್ವಿರಾನ್ಮೆಂಟಲ್ ಅಸೋಸಿಯೇಷನ್ ಆಫ್ ಬೆಂಗಳೂರು ಸಂಸ್ಥೆಯವರು ಉಚಿತವಾಗಿ ಸ್ವೆಟರ್ ಮತ್ತು ಛತ್ರಿ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಕ್ಕಳ ತಮಗೆ ಬೇಕಾದನ್ನು ಯಾವುದೇ ಅಂಜಿಕೆಯಿಲ್ಲದೆ ಕೇಳಬೇಕು. ಸಮಾಜ ಅವರ ಬೇಡಿಕೆಯನ್ನು ಪೂರೈಸುವ ಸಂದರ್ಭಗಳು ಹೆಚ್ಚಿವೆ. ಸೋಮವಾರಪೇಟೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರೌಢಶಾಲಾ ಮಕ್ಕಳಿಗೆ ಶುಚಿ ಫ್ಯಾಡ್ ಪೂರೈಸಬೇಕೆಂದು ಮನವಿ ಮಾಡಿದ್ದಳು. ಈ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಯಿತು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ಯಾಡ್ ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರೋಹಿಣಿ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಸೇರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಛಾವಣಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳಿಗೆ ಪಾಲಕರು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಕರನ್ನು ನೇಮಿಸಿದರೆ ಸಾಲದು. ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕೆಲಸವಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಸಿಗುವ ಅಲ್ಪ ಅನುದಾನದಲ್ಲಿ ಶಾಲೆಗಳ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಗ್ರಾಮದವರು ಕೈಜೋಡಿಸಬೇಕು ಎಂದರು.
ಎಸ್‌ಡಿಎಂಸಿ ಸದಸ್ಯ ಕೆ.ವಿ.ದಿವಾಕರ್, ಶುಂಠಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವಿತ್, ಅಂಗನವಾಡಿ ಕಾರ್ಯಕರ್ತೆ ಸುಜಾತಾ, ಶಾಲೆ ಮುಖ್ಯಶಿಕ್ಷಕ ಎನ್.ಸಿ.ಮಂಜಪ್ಪ, ಶಿಕ್ಷಕ ಜಿ.ಎಂ.ದಯಾನಂದ, ಪ್ರತಿಷ್ಠಾನದ ಪೊನ್ನಪ್ಪ ಇದ್ದರು.