ಬಂಟ್ವಾಳ: ಇಂದು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಸೇರಿದಂತೆ ಸರ್ಕಾರದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆಯಾಗುತ್ತಿದ್ದು ಸಮಾಜ ಜಾಗೃತಿ, ಪರಿವರ್ತನೆಯತ್ತ ಹೋಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕಲ್ಬುರ್ಗಿ ನಾರಾಯಣ ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಡಾ. ಪ್ರಣವಾನಂದ ರಾಮ್ ಸ್ವಾಮೀಜಿ ಹೇಳಿದರು.
ಸಜೀಪಮೂಡ ಗ್ರಾಮದ ಸುಭಾಶ್ ನಗರ ನಾರಾಯಣ ಗುರು ಸೇವಾ ಸಮಿತಿ ಇದರ ವತಿಯಿಂದ ನಾರಾಯಣ ಗುರು 169ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಗುರುಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಇಂದು ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಹೆಚ್ಚಾಗಿ ಸಮಾಜ ನಿಷ್ಠೆ ಕಡಿಮೆಯಾಗಿದ್ದು ನಾವೆಲ್ಲರೂ ನಾರಾಯಣ ಗುರುಗಳ ಪಕ್ಷ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಗೌರವಾಧ್ಯಕ್ಷ ಕೆ. ಸಂಜೀವ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ನಾರಾಯಣ ಗುರು ಶಕ್ತಿ ಪೀಠದ ಉಪಾಧ್ಯಕ್ಷ ಜಿತೇಂದ್ರ ಪೂಜಾರಿ ಮಾತನಾಡಿದರು. ಸಂಘದ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಅಧ್ಯಕ್ಷತೆ ವಹಿಸಿದ್ದರು.
ಸಜೀಪ ಮಾಗಣೆಯ ಶ್ರೀ ನಾಲ್ಕೈತ್ತಾಯ ದೈವದ ಪಾತ್ರಿ ಶಂಕರ ಯಾನೆ ಕೋಚ ಪೂಜಾರಿ, ನಾಟಿ ವೈದ್ಯ ಗಂಗಯ ಪೂಜಾರಿ, ವೀರಪ್ಪ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಶಂಕರ್ ಕಾನ್ಸಲೆ ಸ್ವಾಗತಿಸಿ, ಕೋಶಾಧಿಕಾರಿ ರಮೇಶ್ ಅನ್ನಪ್ಪಾಡಿ ವಂದಿಸಿದರು.