ಜಿಲ್ಲೆ

ಸಿದ್ದರಾಮಯ್ಯ ಪರ ಒಕ್ಕಲಿಗ ಸಮಾಜ ನಿಲ್ಲಬೇಕು

ಮಂಜುನಾಥ ತಿಮ್ಮಯ್ಯ

ಮೈಸೂರು: ಜಾತ್ಯತೀತ ವ್ಯಕ್ತಿತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಕ್ಕಲಿಗ ಸಮಾಜ ಸದಾ ನಿಲ್ಲಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.


ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಅಭಿವೃದ್ಧಿಗಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿರುವ ಸಿದ್ದರಾಮಯ್ಯ ಕುರಿತು ಒಕ್ಕಲಿಗರು ಅಭಿಮಾನವನ್ನೂ ಇಟ್ಟುಕೊಳ್ಳಬೇಕು ಎಂದರು.


ಸಿದ್ದರಾಮಯ್ಯ ಹೆಸರನ್ನು ಮುಂದಿಟ್ಟುಕೊಂಡು ಕೆಲವರು ಒಕ್ಕಲಿಗ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅನಗತ್ಯ ವಿಚಾರಗಳು ಚರ್ಚೆಯಾಗುತ್ತಿರುವುದು ನೋವಿನ ಸಂಗತಿ ಎಂದರು.


2013ರಿಂದ 2018ರ ವರೆಗೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ನಾಡುಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಆದೇಶಿಸಿದ್ದರು. ಜತೆಗೆ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಸಮಾಜದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಬೆಳವಣಿಗೆಗೂ ಸಹಕಾರ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.


ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ಹಿಡಿದು ಈವರೆಗಿನ ಕಾಂಗ್ರೆಸ್ ಸರ್ಕಾರ ಸಮಾಜಕ್ಕೆ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದೆ. ಸಮುದಾಯಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಏನೂ ಮಾಡಿಲ್ಲವೆಂದು ಹೇಳುವುದಿಲ್ಲ. ಆದರೆ ಸಿದ್ದರಾಮಯ್ಯ ಅವರು ಕೂಡ ಕೆಲಸ ಮಾಡಿದ್ದಾರೆ. ನಮ್ಮ ಸಮಾಜದ ಒಳಿತಿಗೆ ಮತ್ತು ಅಭಿವೃದ್ಧಿ ಕೆಲಸಕ್ಕೆ ಅವರು ಹಿಂದೇಟು ಹಾಕಿಲ್ಲ. ಆದ್ದರಿಂದ ಸಮಾಜ ಸಿದ್ದರಾಮಯ್ಯ ಅವರೊಂದಿಗೆ ಸದಾ ನಿಲ್ಲಬೇಕು ಎಂದು ಮನವಿ ಮಾಡಿದರು.


ಆದಿಚುಂಚನಗಿರಿ ಮಠ ಜಾತ್ಯತೀತ ಮಠ. ಅನೇಕ ಮಠಗಳನ್ನು ಹುಟ್ಟುಹಾಕಿದೆ. ಸಣ್ಣಪುಟ್ಟ ಜಾತಿಗಳಿಗೆ ಮಠ ನಿರ್ಮಾಣಕ್ಕೂ ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ, ಈ ಮಠ ಕೇವಲ ಒಕ್ಕಲಿಗರಿಗೆ ಸಿಮೀತವಲ್ಲ. ಜಾತ್ಯತೀತ ಮನಸ್ಸಿನಿಂದ ಉದಾರ ಸೇವೆಯನ್ನು ಮಠ ಮಾಡಿಕೊಂಡು ಬಂದಿದೆ ಎಂದರು.