ಹಗರಿಬೊಮ್ಮನಹಳ್ಳಿಯ ಹಳೇ ಊರಿನ ಪಿಎಂಶ್ರೀ ಸಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ವಿಶಾಲಾಕ್ಷಮ್ಮ ಮಾತನಾಡಿದರು. ಪುರಸಭೆ ಸದಸ್ಯೆ ಅಂಬಳಿ ಮಂಗಳಾ, ಎಸ್ಡಿಎಂಸಿ ಅಧ್ಯಕ್ಷ ಮಜ್ಜಿಗಿ ವೀರೇಶ, ಮುಖ್ಯಶಿಕ್ಷಕ ವೀರನಗೌಡ ಇತರರಿದ್ದರು. 
ಜಿಲ್ಲೆ

ಜಾಲತಾಣಗಳಿಂದ ಸಮಾಜ ಕಲುಷಿತ

ಹಗರಿಬೊಮ್ಮನಹಳ್ಳಿ: ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ಹಾದಿ ತಪ್ಪುತಿದ್ದಾರೆ. ಇದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಹಿರಿಯ ವಕೀಲೆ ವಿಶಾಲಾಕ್ಷಮ್ಮ ಹೇಳಿದರು.

ಪಟ್ಟಣದ ಹಳೇ ಊರಿನ ಪಿಎಂಶ್ರೀ ಸಮಾಹಿಪ್ರಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಜೀವನ ನಿರ್ವಹಣೆಗಾಗಿ ದುಡಿಯಲು ಹೋಗಿರುತ್ತಾರೆ. ನೀವು ಶಾಲೆಗೆ ಬರುತ್ತೀರಿ. ಮನೆಗೆ ತೆರಳುವಾಗ ತಡವಾದರೆ ಸುಳ್ಳು ಹೇಳಿ ನಂಬಿಸುತ್ತೀರಿ. ಒಂದು ಸುಳ್ಳು ಯಶಸ್ವಿಯಾದರೆ ಅದನ್ನೇ ರೂಢಿಯಾಗಿಸಿಕೊಳ್ಳುತ್ತೀರಿ. ಆದ್ದರಿಂದ ಸುಳ್ಳು ಹೇಳಬಾರದು. ಹೆಣ್ಣು ಮಕ್ಕಳು ಯಾವುದೇ ಆಮಿಷಗಳಿಗೆ ಬಲಿಯಾಗದೆ ಮನಸ್ಸನ್ನು ನಿಯಂತ್ರಿಸಿ ಜಾಗೃತರಾಗಿರಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಜ್ಜಿಗಿ ವೀರೇಶ ಮಾತನಾಡಿ, ಮಕ್ಕಳು ಧರಿಸುವ ಬಟ್ಟೆಗಳ ಮೇಲೆ ಕಾಳಜಿ ಇರಲಿ. ಫ್ಯಾಷನ್‌ಗಳಿಗೆ ಮಾರು ಹೋಗಿ ವಿದ್ಯಾರ್ಥಿ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಪುರಸಭೆ ಸದಸ್ಯೆ ಅಂಬಳಿ ಮಂಗಳಾ, ಎಸ್ಡಿಎಂಸಿ ಸದಸ್ಯ ಬೈಲ್‌ಪತ್ತಾರ್ ವೆಂಕಟೇಶ, ಮುಖ್ಯಶಿಕ್ಷಕ ವೀರನಗೌಡ, ಶಿಕ್ಷಕರು, ಸಿಬ್ಬಂದಿ ಇದ್ದರು.