ಮಸ್ಕಿ ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ರಡ್ಡಿ ಸಮಾಜದ 10ನೇ ವಾರ್ಷಿಕೋತ್ಸವ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಕೆಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  
ಜಿಲ್ಲೆ

ಸಮಾಜ ಕಟ್ಟುವಲ್ಲಿ ಸಂಕುಚಿತ ಭಾವನೆ ಸಲ್ಲದು- ಬಸವರಾಜ ಪಾಟೀಲ ಆನ್ವರಿ

ಶಶಿಧರ ಎಲ್

ಮಸ್ಕಿ: ಸಮಾಜ ಕಟ್ಟುವಲ್ಲಿ ಸಂಕುಚಿತ ಭಾವನೆಯನ್ನು ಬಿಟ್ಟು ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಒಗ್ಗೂಡಿ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸೋಮವಾರ ನಡೆದ ರಡ್ಡಿ ಸಮಾಜದ 10ನೇ ವಾರ್ಷಿಕೋತ್ಸವ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆಚಾರ ವಿಚಾರಗಳಿಂದ ಬೇರೆ ಬೇರೆಯಾದ ರಡ್ಡಿ ಸಮಾಜ ಅಸ್ಥಿತ್ವದಲ್ಲಿದೆ. ರಡ್ಡಿ ಸಮಾಜಕ್ಕೆ ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನ ಆದರ್ಶ ಪ್ರಾಯರು. ಕರ್ನಾಟಕದಲ್ಲಿ ದಕ್ಷಿಣ ಭಾಗದ ರಡ್ಡಿಗಳು ವೇಮನನ್ನು ಆರಾಧಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಹೇಮರಡ್ಡಿ ಮಲ್ಲಮ್ಮನನ್ನು ಆರಾಧಿಸುತ್ತೇವೆ. ಹೇಮ ಬೇರೆ ವೇಮ ಬೇರೆ ಅಲ್ಲ ಎಂಬುದನ್ನು ತೊರಿಸಲು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ರಡ್ಡಿ ಸಮಾಜದ ಬೇಡಿಕೆಯಂತೆ ಮಸ್ಕಿ ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋಟಿ ರೂ. ಅನುದಾನ ನೀಡಲಾಗಿದೆ. ಕಲ್ಲು ಶಿಲಾ ದೇವಸ್ಥಾನ ನಿರ್ಮಾಣಕ್ಕೆ ಕೋಟಿ ಸಾಲುವುದಿಲ್ಲ. ಹಾಗಾಗಿ ಸಮಾಜ ಬಾಂದವರು ಆರ್ಥಿಕ ಸಹಾಯ ಮಾಡುವ ಮೂಲಕ ದೇವಸ್ಥಾನ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗಚ್ಚಿನಮಠದ ಶ್ರೀವರರುದ್ರಮುನಿ ಶಿವಾಚಾರ್ಯ, ಮಾಜಿ ಸಚಿವ ವೆಂಕಟರಾವ್ ನಾಡುಗೌಡ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ರಡ್ಡಿ ಸಮಾಜದ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ವಿಜಯ ಡಂಬಳ, ರವಿಕುಮಾರ, ಶಿವಶಂಕರ ಗಡಾದ, ಮಸ್ಕಿ ತಾಲೂಕು ರಡ್ಡಿ ಸಮಾಜದ ಗೌರವ ಅಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಅಧ್ಯಕ್ಷ ಅಯ್ಯಣ್ಣ ನಾಗರಬೆಂಚಿ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕೊಮಾರಪ್ಪ ಕಮತರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ವಿಶ್ವನಾಥ ಪಾಟೀಲ ತೊರಣದಿನ್ನಿ, ವಿಶ್ವನಾಥ ಪಾಟೀಲ ಅಮಿನಗಡ, ಪುರಸಭೆ ಮುಖ್ಯಾಧಿಕಾರಿ ವೆಂಕಟರಡ್ಡಿ ಇದ್ದರು.