ಜಿಲ್ಲೆ

ಸಾಮಾಜಿಕ ಪರಿವರ್ತನೆಯ ಹರಿಕಾರ ಅರಸು

ಹರ್ಷ ನ.ಪುರೋಹಿತ

ಹಿರಿಯೂರು: ಶೋಷಿತರ ಪರಿವರ್ತನೆಯ ಜೀವನಕ್ಕೆ ಅಡಿಪಾಯ ಹಾಕಿದ ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ಹಿಂದುಳಿದ ವರ್ಗ, ದಲಿತರು, ಅಶಕ್ತರು, ತುಳಿತಕ್ಕೊಳಪಟ್ಟ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಮಹಾನ್ ಚೇತನ ಎಂದು ತಿಳಿಸಿದರು.

ನಗರಸಭೆ ಸದಸ್ಯೆ ಮಮತಾ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೇರುವ, ಅಧಿಕಾರ ಹಿಡಿಯುವ ಕನಸು ನನಸಾಗಿಸಲು ಅರಸು ಅವರ ಚಿಂತನೆಯ ಫಲವಾಗಿ ಹಿಂದುಳಿದ ವರ್ಗದವರು ಮೀಸಲಾತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.

ಹಿಂದುಳಿದ ವರ್ಗ ಮತ್ತು ದೀನ ದಲಿತರ ಅಭಿವೃದ್ಧಿಗೆ ದೇವರಾಜ ಅರಸು ನಂತರ ಯಾರಾದರೂ ಶ್ರಮಿಸಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಮಾಜಮುಖಿ ಚಿಂತನೆಯ ಮೂಲಕ ಇಂದು ಸರ್ವ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಮಾತನಾಡಿ, ಅರಸು ಅವರ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆ, ರಾಜಕೀಯ ನಾಯಕರಿಗೆ ದಾರಿದೀಪವಾಗಿದ್ದು, ಅರಸು ಅವರ ದಾರಿಯಲ್ಲಿ ಸಾಗಿದರೆ ಶೋಷಿತರ ಬದುಕನ್ನು ಹಸನಾಗಿಸುವುದರ ಜತೆಗೆ ಸರ್ವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ನಗರಸಭೆ ಅಧ್ಯಕ್ಷ ಅಜ್ಜಪ್ಪ, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯರಾದ ಈರಲಿಂಗೇಗೌಡ, ಜಗದೀಶ್, ಅನಿಲ್, ಶಿವರಂಜನಿ, ಗುಂಡೇಶ್ ಕುಮಾರ್, ತಿಪ್ಪೇಸ್ವಾಮಿ ಮುಖಂಡರಾದ ಅಶೋಕ್, ಶಿವಕುಮಾರ್, ಗುರುಪ್ರಸಾದ್, ಭೂತೇಶ್, ಚಿಕ್ಕಣ್ಣ, ತಿಮ್ಮಯ್ಯ ಇಮ್ರಾನ್ ಇತರರಿದ್ದರು.