ಸಾಮಾಜಿಕ ಪರಿವರ್ತನಾ ಶಿಬಿರ 
ಜಿಲ್ಲೆ

ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯವಾಗಲಿದ್ದು, ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಬೌದ್ಧ ಸಮಾಜ ರಾಜ್ಯ ಘಟಕದ ಅಧ್ಯಕ್ಷ ಹ.ರಾ.ಮಹೇಶ್ ಹೇಳಿದರು.
ಪಟ್ಟಣದಲ್ಲಿ ದಲಿತ ಮತ್ತು ಪ್ರಗತಿಪರ ಹೋರಾಟ ಸಮಿತಿ ಮತ್ತು ಕರ್ನಾಟಕ ಬೌದ್ಧ ಸಮಾಜದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅರಿವು ಸಾಮಾಜಿಕ ಪರಿವರ್ತನಾ ಶಿಬಿರದಲ್ಲಿ ಮಾತನಾಡಿದರು.
ಉನ್ನತ ಶಿಕ್ಷಣದಿಂದ ಸಮಾಜಕ್ಕೆ ಕೊಡುಗೆ ನೀಡಬಹುದಾಗಿದೆ. ಸಾಧನೆ, ಸಾಧಕನ ಸ್ವತ್ತು. ಹಾಗಾಗಿ ಯುವಕರು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳೆಂಬ ಮೂರು ಮೂಲಮಂತ್ರ ನೀಡಿದ್ದಾರೆ. ಇವುಗಳಿಂದ ಪ್ರತಿಯೊಬ್ಬರೂ ಹಕ್ಕುಗಳನ್ನು ಪಡೆಯಬಹುದಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಲ ಕುಗ್ಗಿಸುವವರಿಗೆ ಜನತೆ ತಕ್ಕ ಪಾಠ ಕಲಿಸಬೇಕು. ಜಾಗೃತಿ ಕಾರ್ಯಕ್ರಮಗಳ ಮೂಲಕ ಸಂವಿಧಾನಕ್ಕೆ ಬಲ ನೀಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ದಲಿತರು ಮತ್ತು ಹಿಂದುಳಿದವರು ಒಗ್ಗೂಡಿ ಲೋಕಸಭೆಯಲ್ಲಿ ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ದಲಿತ ಮತ್ತು ಪ್ರಗತಿಪರ ಒಕ್ಕೂಟಗಳು ಕಾರ್ಯನಿರ್ವಹಿಸಬೇಕು ಎಂದರು.
ಭಾರತೀಯ ಭೀಮ ಸೇನೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬ್ಯಾಟರಾಜು ಮಾತನಾಡಿ, ಅಂಬೇಡ್ಕರ್ ಅವರ ಜೀವನ ಪ್ರತಿಯೊಬ್ಬ ಸಾಧಕರಿಗೂ ಸ್ಫೂರ್ತಿಯಾಗಿದೆ. ಸಂವಿಧಾನದ ಪೀಠಿಕೆಗಳನ್ನು ಮನೆ ಮನೆಗಳಲ್ಲಿ ಮಕ್ಕಳಿಗೆ, ಯುವಕರಿಗೆ ತಿಳಿಸುವುದರಿಂದ ಜಾಗೃತಿ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಲಾಗುವುದು ಎಂದರು.