ಸೊರಬ: ರೋಟರಿ ಸಮಾಜಮುಖಿ ಸೇವೆಯನ್ನು ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡು ಸ್ಥಾಪನೆಗೊಂಡ ಸಂಸ್ಥೆ. ತಾಲೂಕಿನಲ್ಲಿಯೂ ವಿಶೇಷವಾದ ಕಾರ್ಯಕ್ರಗಳನ್ನು ಹಮ್ಮಿಕೊಂಡಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ. ಎ.ಎಸ್.ನಾಗರಾಜ್ ಹೇಳಿದರು.
ತಾಲೂಕಿನ ಕಡೆಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ರೋಟರಿ ಸಂಸ್ಥೆಯಿಂದ ಕ್ರೀಡಾ ಸಾಮಗ್ರಿ ಹಾಗೂ ಶಾಲೆಗೆ ಪರಿಕರಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಧನೆಯನ್ನು ಮೆರೆಯಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯು ಮಾಡುತ್ತಾ ಬರುತ್ತಿದೆ ಎಂದರು.
ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ನೀಡುವುದರಿಂದ ಕ್ರೀಡಾ ಮನೋಭಾವನೆ ಅವರಲ್ಲಿ ಹೆಚ್ಚಾಗುತ್ತದೆ. ಸಾಧನೆ ಮಾಡಲು ಸ್ಫೂರ್ತಿ ನೀಡಿದಂತಾಗುತ್ತದೆ ಎಂದರು.
ಮಾಜಿ ಅಧ್ಯಕ್ಷ ನಾಗರಾಜ್ ಗುತ್ತಿ, ಸಿಆರ್‌ಪಿ ಹಾಲೇಶ್, ಬಿಅರ್‌ಪಿ ಮಂಜಪ್ಪ ಹುಲ್ತಿಕೊಪ್ಪ, ಮುಖ್ಯಶಿಕ್ಷಕಿ ಪದ್ಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ಗ್ರಾಪಂ ಸದಸ್ಯೆ ನೀಲಾವತಿ, ಪ್ರಮುಖರಾದ ಸೀನಪ್ಪ, ಹನುಮಂತಪ್ಪ, ಕೃಷ್ಣಪ್ಪ, ಕಾಳಪ್ಪ, ಪುನೀತ್, ಕಾರ್ತಿಕ್, ಅರುಣ್ ಕುಮಾರ್, ಬಸವರಾಜಪ್ಪ, ಶಿಲ್ಪಾ ಇತರರಿದ್ದರು.