ಹುಬ್ಬಳ್ಳಿ: ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಶ್ರೀ ಜಗದ್ಗುರು ಗಂಗಾಧರ ಪದವಿಪೂರ್ವ ಕಾಲೇಜ್‌ನ 2024-25ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಶನಿವಾರ ಜರುಗಿತು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸತತ ಅಧ್ಯಯನದಿಂದ ಮಾತ್ರ ನಿಗದಿತ ಗುರಿ ಮುಟ್ಟಲು ಸಾಧ್ಯ. ನಾವು ಜನಿಸಿದ ಬಳಿಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ದೃಢ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರೊ. ಮೋಹನರಾಜ ಇಲ್ಲೂರ ಅತಿಥಿಗಳಾಗಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ವೇಗ ತೀವ್ರಗೊಂಡಿದೆ. ಸ್ಪರ್ಧಾತ್ಮಕತೆಯೂ ಇದರೊಟ್ಟಿಗೆ ಸಮ್ಮಿಳಿತಗೊಂಡಿದೆ. ಜಾಗತಿಕ ಸ್ಪರ್ಧೆ ಎದುರಿಸಲು ವಿದ್ಯಾರ್ಥಿಗಲು ಎಲ್ಲ ರೀತಿಯ ಅಧ್ಯಯನ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುರಡಿಕೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರುಮಾತೆ ಶಾರದಾ ದೊಡಗಟ್ಟಿ ಮಾತನಾಡಿದರು.
ಶ್ರೀಜಮೂವಿ ಸಂಘದ ಗೌರವ ನಿರ್ದೇಶಕ ಲಿಂಗರಾಜ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಜಿ.ಬಿ. ಭದ್ರಾಪೂರ ಪ್ರತಿಜ್ಞಾ ವಿಧಿ ಬೋಧಿಸಿದರು.
ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ 7 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಅಲ್ಲದೇ 2 ವರ್ಷ ಭರಿಸಿದ ಶಾಲಾ ಶುಲ್ಕವನ್ನು ಪ್ರೋತ್ಸಾಹಕವಾಗಿ ಮರಳಿ ನೀಡಿಸಲಾಯಿತು. ಶಿಕ್ಷಕರತ್ನ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಸಿ. ಹೂಗಾರ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಚನ್ನಬಸಪ್ಪ ಧಾರವಾಡಶೆಟ್ಟರ್, ಬಿ.ಎಂ. ಸಾಲಿಮಠ, ಎ.ಸಿ. ನಿರಂಝನ, ಪೂಜಾ ಹುಲಮನಿ, ಪ್ರಿಯಾಂಕ ಗದಗ, ನಾಗರಾಜ ಮೊರಬದ ಇತರರಿದ್ದರು.