ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರದ ದಿ. ಬಿ.ಜಿ. ತುಂಬಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉದ್ಯಮಿ ಸೋಮನಗೌಡ ಮೇಟಿ ಕೊಡಮಾಡಿದ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಮಂಗಳವಾರ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ತುಂಬಗಿ, ಶಾಲೆಯ ಮುಖ್ಯಗುರು ಪಿ.ಎಚ್. ಸುರಪುರ, ವಿಜಯವಾಣಿ ಪ್ರತಿನಿಧಿ ಶಂಕರ ಹೆಬ್ಬಾಳ, ಪತ್ರಕರ್ತ ಗುಲಾಂಮೊಹ್ಮದ ದಫೇದಾರ, ಮುಖಂಡರಾದ ಮಹಾಂತೇಶ ಬೂದಿಹಾಳಮಠ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು. 
ಜಿಲ್ಲೆ

ದುಡ್ಡು ಸಂಪಾದನೆಗಿಂತ ಸಾಮಾಜಿಕ ಸೇವೆ ಮುಖ್ಯ

ಮುದ್ದೇಬಿಹಾಳ: ನಾವು ಹೆಚ್ಚು ದುಡ್ಡು ಸಂಪಾದನೆ ಮಾಡುತ್ತೇವೆ ಎಂಬುದು ಮುಖ್ಯವಾಗುವುದಿಲ್ಲ. ಆದರೆ ಎಷ್ಟು ಜನಕ್ಕೆ ನಾವು ಸಹಾಯ ಮಾಡುತ್ತೇವೆ. ಎಷ್ಟು ಜನಕ್ಕೆ ಒಳ್ಳೆಯದನ್ನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದು ಉದ್ಯಮಿ, ಯುವ ಮುಖಂಡ ಸೋಮನಗೌಡ ಮೇಟಿ ಹೇಳಿದರು.

ತಾಲೂಕಿನ ಮಡಿಕೇಶ್ವರದ ದಿ. ಬಿ.ಜಿ. ತುಂಬಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ಬಡತನದ ಪರಿಸ್ಥಿತಿ ಇದೆ ಎಂದು ಓದುವುದನ್ನು ಬಿಡಬಾರದು. ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಸಾಧನೆ ಮಾಡಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಸ್ಪರ್ಧಾತ್ಮಕ ವಿಷಯಗಳ ಮಾಹಿತಿಯುಳ್ಳ ವಿದ್ಯಾರ್ಥಿಮಿತ್ರ ಸಂಚಿಕೆಯೊಂದಿಗೆ ದೊರೆಯುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಮುಖ್ಯಗುರು ಪಿ.ಎಚ್. ಸುರಪುರ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ದಡ್ಡರಲ್ಲ. ಅವರಲ್ಲಿ ಪ್ರತಿಭೆಯಿದೆ. ಅವರಿಗೆ ಸೂಕ್ತ ತರಬೇತಿ, ಶಿಕ್ಷಣ ಒದಗಿಸಿದರೆ ರಾಜ್ಯಮಟ್ಟದಲ್ಲಿ ಗುರುತಿಸುವ ಸಾಧನೆ ಮಾಡುತ್ತಾರೆ. ನಮ್ಮ ಶಾಲೆಯ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಇದಕ್ಕೆ ಸಾಕ್ಷಿಯಾಗಿದೆ. ದಾನಿಗಳಾದ ಸೋಮನಗೌಡ ಮೇಟಿ ಅವರ ನೆರವು ವಿದ್ಯಾರ್ಥಿಗಳಿಗೆ ದೊರಕಿರುವುದು ಸಂತಸ ತಂದಿದೆ ಎಂದರು.

ವಿಜಯವಾಣಿ ತಾಲೂಕಾ ಪ್ರತಿನಿಧಿ ಶಂಕರ ಹೆಬ್ಬಾಳ, ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿ-ಉದ್ಯೋಗಮಿತ್ರ ಸಂಚಿಕೆ ನಿಮ್ಮ ಮಿತ್ರನಾಗಿ ಮಾರ್ಗದರ್ಶನ ಮಾಡುತ್ತದೆ. ರಾಜ್ಯದ ಪ್ರತಿಷ್ಠಿತ ತರಬೇತಿ ಕೇಂದ್ರಗಳ ನುರಿತ ಶಿಕ್ಷಕರು, ಉಪನ್ಯಾಸಕ ವರ್ಗದವರಿಂದ ಪಾಠಗಳನ್ನು ಅದರಲ್ಲಿ ನಿತ್ಯವೂ ನೀಡಲಾಗುತ್ತಿದೆ. ಅಲ್ಲದೇ ಉದ್ಯೋಗದ ಕುರಿತು ಮಾಹಿತಿ ಬರುತ್ತಿದ್ದು ವಿದ್ಯಾರ್ಥಿಗಳು ಅದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ತುಂಬಗಿ, ಪತ್ರಕರ್ತ ಗುಲಾಂಮೊಹ್ಮದ ದಫೇದಾರ, ಶಿಕ್ಷಕರಾದ ಪಿ.ಎ. ಬಿರಾದಾರ, ಎಸ್.ಡಿ. ರಾಠೋಡ, ವಿ.ಎ. ಬನಸೋಡೆ, ಸಿಬ್ಬಂದಿ ಆರ್.ಎಸ್. ಕೋಳಿ, ಬಿ.ಎಸ್. ಮಕಾಳೆ ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಸವರಾಜ ಹಂಚಲಿ ಸ್ವಾಗತಿಸಿದರು. ಹೇಮಾವತಿ ಚಳ್ಳಗಿ ನಿರೂಪಿಸಿದರು. ವಿ.ಜಿ. ನಾಗರಾಳ ವಂದಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಸಂಚಿಕೆ ವಿತರಿಸಲಾಯಿತು.