ಜಿಲ್ಲೆ

ಸಾಮಾಜಿಕ ಸಂವೇದನೆಗಳ ಒಳಸುಳಿ ತಿಳಿಸಲಿ

ರಾಮದುರ್ಗ:ಭಾರತೀಯ ಇಂಗ್ಲಿಷ್ ಲೇಖಕರು ತಮ್ಮ ಕಾದಂಬರಿಗಳ ಮೂಲಕ ಸೂಕ್ಷ್ಮಸಾಮಾಜಿಕ ಸಂವೇದನೆ ಕಟ್ಟಿಕೊಟ್ಟಿದ್ದು, ಉಪನ್ಯಾಸಕರು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಮೆಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಜಯ ಶೇಷಾದ್ರಿ ಹೇಳಿದರು.

ಪಟ್ಟಣದ ಸಿಎಸ್ ಬೆಂಬಳಗಿ ಕಲಾ, ಎಸ್‌ಎಂಆರ್ ಪಾಲರೇಶ ವಿಜ್ಞಾನ ಹಾಗೂ ಜಿಎಲ್ ರಾಠಿ ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಇಂಗ್ಲಿಷ್ ಕಾದಂಬರಿಗಳಲ್ಲಿ ಸಮಕಾಲೀನ ಉದಯೋನ್ಮುಖ ಪ್ರವತ್ತಿಗಳು ವಿಷಯವಾಗಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಸಮಕಾಲೀನ ಸಾಹಿತ್ಯದ ಸೂಕ್ಷ್ಮಅಂಶಗಳ ತಿರುಳನ್ನು ಪ್ರಸ್ತುತ ಸನ್ನಿವೇಶಗಳ ಜತೆಗೆ ಪರಾಮರ್ಶಿಸಿದರೆ ವಿದ್ಯಾರ್ಥಿಗಳು ವಿಷಯದ ಆಳದ ಮತ್ತಷ್ಟು ತಿಳಿಯಲು ಸಾಧ್ಯ ಎಂದರು.

ಕರ್ನಾಟಕದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಶ್ಯಾಮಲಾ ರತ್ನಾಕರ ಮಾತನಾಡಿ, ಇಂಗ್ಲಿಷ್ ಭಾವನಾತ್ಮಕವಾಗಿ ಸಂವಹನದ ಭಾಷೆಯಾಗಿ ಸಜ್ಜುಗೊಳಿಸಲು ವೇದಿಕೆ ಸಿದ್ಧಗೊಳಿಸಬೇಕಿದೆ ಎಂದರು.

ಡಾ. ಮಂಜುಳಾ ಕಣವಿ ಮಾತನಾಡಿ, ಓದು ನಮ್ಮನ್ನು ಮಾನವೀಯಗೊಳಿಸುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಡಾ.ಪಿ.ಬಿ. ತೆಗ್ಗಿಹಳ್ಳಿ, ಡಾ. ಪ್ರಶಾಂತ ಮೋಟೆ ಮಾತನಾಡಿದರು.

ಗಣ್ಯರನ್ನು ಸನ್ಮಾನಿಸಲಾಯಿತು. ದೇಶದ ವಿವಿಧೆಡೆಯ 50ಕ್ಕೂ ಹೆಚ್ಚು ಸಂಶೋಧನೆ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ. ದಾಮೋದರ ಅಧ್ಯಕ್ಷತೆ ವಹಿಸಿದ್ದರು.

ಗೌರವ ಕಾರ್ಯದರ್ಶಿ ಎಸ್.ಎಸ್. ಸುಲ್ತಾನಪುರ, ಡಾ.ಎಸ್.ಬಿ. ಸಂಗಮ, ವಿದ್ಯಾರ್ಥಿನಿ ವಿ.ವಿ. ಮರಿಬಾಶೆಟ್ಟಿ, ಡಾ.ವಿ.ಎಂ.ಜಬಡೆ, ಸಮ್ಮೇಳನದ ಸಂಚಾಲಕ ಪ್ರೊ. ಎಸ್.ಕೆ. ರಂಗಪ್ಪಗೊಳ ಇತರರಿದ್ದರು.