ಜಿಲ್ಲೆ

ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ರಾಜ್ಯದ ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಕಾರ್ಮಿಕ ಇಲಾಖೆಯಿಂದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 1.53 ಕೋಟಿ ಅಸಂಘಟಿತ ಕಾರ್ಮಿಕರಿದ್ದು , ಇದರಲ್ಲಿ 1.06 ಲಕ್ಷ ಅಸಂಘಟಿತ ಕಾರ್ಮಿಕರಾಗಿ ನೋಂದಣಿಯಾಗಿದ್ದಾರೆ. ಈ ಎಲ್ಲರಿಗೆ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ವಿತರಿಸಿದ್ದು , ಅಘಪಾತವಾಗಿ ಮೃತಪಟ್ಟರೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು. ಪ್ರತಿ ಗಂಟೆಗೆ ಇಪ್ಪತು ಅಘಘಾತಗಳು ಸಂಭವಿಸುತ್ತಿದ್ದು ಇದು ಕಳವಳಕಾರಿ ಸಂಗತಿಯಾಗಿದ್ದು, ಇದರಲ್ಲಿ ಮೃತಪಟ್ಟವರು ಅಧಿಕ ಯುವಕರೇ ಆಗಿದ್ದಾರೆ ಎಂದು ವಿವರಿಸಿದರು.

ದೇಶದಲ್ಲಿ ದುಡಿಯುವ ಶೇ. 83 ರಷ್ಟು ಜನರು 91ವರ್ಗದ ಅಸಂಘಟಿತ ಕಾರ್ಮಿಕರಾಗಿದ್ದು, ಅವರಿಗೆ ಎಲ್ಲರಿಗೆ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೆರವು ಒದಗಿಸಲಾಗುವುದು. ಪೆಟ್ರೊಲ್ ಹಾಗೂ ಡಿಸೇಲ್ ಮೇಲಿ ವಿಧಿಸುವ ಸೆಸ್ ಶೇ. 1ರಷ್ಟು ಕಾರ್ಮಿಕರ ಅಭಿವೃದ್ಧಿಗೆ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಆಶಾದೀಪ ಯೋಜನೆಯಡಿ ಎರಡು ವರ್ಷಗಳವರೆಗೆ ತರಬೇತಿ ಪಡೆಯುವ ಎಸ್‌ಸಿ, ಎಸ್‌ಟಿ ಮಕ್ಕಳಿಗೆ ಪ್ರತಿ ತಿಂಗಳು ಏಳು ಸಾವಿರ ರೂ. ನೀಡುತ್ತಿದ್ದು. ಇದು ದೇಶದಲ್ಲಿಯೇ ಪ್ರಪ್ರಥಮವಾಗಿದೆ ಎಂದರು.

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರಿ ಹೊರ ಗುತ್ತಿಗೆ ನೌಕರರಿಗೆ ಸೊಸೈಟಿ ಸ್ಥಾಪಿಸಿ, ಅದರ ಮೂಲಕ ಪ್ರತಿ ತಿಂಗಳ ವೇತನ ಪಾವತಿಗೊಳಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿಯೇ ಐದು ವರ್ಷದಲ್ಲಿ ಮೂರು ಲಕ್ಷ ಕೋಟಿ ರೂ. ವಹಿವಾಟು ನಡೆಯಲಿದೆ. ಆದರೆ, ಕೇಂದ್ರ ಸರ್ಕಾರ ಜನಪರ ಕಾಳಜಿ ಕೈಗೊಂಡಿಲ್ಲ ಎಂದು ವಾಗ್ದಳಿ ನಡೆಸಿದರು.

ಸಂಸದ ಈ.ತುಕಾರಾಮ್ ಮಾತನಾಡಿ, ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಒದಗಿಸುವಲ್ಲಿ ಸಚಿವರ ಪಾತ್ರ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಹಾಗೂ ಸೇತುವೆ ಕಾಮಗಾರಿಗಳಿಗೆ ವೇಗದಿಂದ ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಶಾಸಕರಾದ ಜೆ.ಎನ್.ಗಣೇಶ, ಈ.ಅನ್ನಪೂರ್ಣ ತುಕಾರಾಮ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಾನಾ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ವಿತರಿಸಲಾಯಿತು. ಬಳಿಕ ಕಾರ್ಮಿಕರ ಆರೋಗ್ಯಕ್ಕಾಗಿ ಸಂಚಾರಿ ಆರೋಗ್ಯ ಘಟಕಗಳ ವಾಹನಗಳಿಗೆ ಸಚಿವರು ಚಾಲನೆ ನೀಡಿದರು.