ಲಿಂಗಸುಗೂರು ಎಸಿ ಅವಿನಾಶ ಸಿಂಧೆ ಅವರಿಗೆ ಸಿಐಟಿಯು ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಸಿಐಟಿಯು ತಾಲೂಕು ಸಂಚಾಲಕ ಮೊಹ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪ, ಅಲ್ಲಾಭಕ್ಷಿ, ರಮೇಶ ವೀರಾಪುರ, ಫಕ್ರುದ್ದೀನ್, ನಜೀರ್ ಮಾಚನೂರು, ಬಸವರಾಜ, ಶರಣಬಸವ, ಹುಲಗಪ್ಪ, ಸರಸ್ವತಿ, ಸಿದ್ಧಮ್ಮ, ಶಹನಾಜ್ ಬೇಗಂ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಭದ್ರತಾ ಮಂಡಳಿ ಬಲಪಡಿಸಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ರಾಷ್ಟ್ರವ್ಯಾಪಿ ಬೇಡಿಕೆಗಳ ದಿನದ ಅಂಗವಾಗಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಐಟಿಯು ಸಂಘಟನೆಯಿಂದ ಎಸಿ ಅವಿನಾಶ ಸಿಂಧೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಅಗತ್ಯ ಬೆಲೆ ಏರಿಕೆ ನಿಯಂತ್ರಿಸಬೇಕು. ರೈತ ವಿರೋಧಿ ಕೃಷಿ ಕಾನೂನು ವಾಪಸ್ ಪಡೆಯಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಸಂವಿಧಾನದ ಧರ್ಮ ನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಕೈ ಬಿಡಬೇಕು. ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು.

ಅಕುಶಲ ಕಾರ್ಮಿಕರಿಗೆ 31 ಸಾವಿರ ಕನಿಷ್ಠ ವೇತನ ಹಾಗೂ ಕೌಶಲದ ಪ್ರತಿ ಹಂತಕ್ಕೆ ಶೇ.15 ಹೆಚ್ಚಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿ ಪಡಿಸಬೇಕು. ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆ ಕೊನೆಯಾಗಬೇಕು.

ಇಎಸ್‌ಐ, ಇಪಿಎಫ್, ಬೋನಸ್ ಕಾಯಿದೆಯಲ್ಲಿ ವಿಧಿಸಲಾದ ಎಲ್ಲ ವೇತನ ಮಿತಿಗಳನ್ನು ತೆರವುಗೊಳಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರುಸ್ಥಾಪಿಸಬೇಕು. ಎಪಿಎಸ್ ಪಿಂಚಣಿದಾರರಿಗೆ ಕನಿಷ್ಠ 9 ಸಾವಿರ ರೂ. ನೀಡಬೇಕು. ದೇಶದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾದ ಸಾಮಾಜಿಕ ಭದ್ರತಾ ಮಂಡಳಿ ಬಲಪಡಿಸಿ ಕೇಂದ್ರ ಸರ್ಕಾರ ವಾರ್ಷಿಕ ನಿವ್ವಳ ಆದಾಯದ ಶೇ. 3 ಅನುದಾನ ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.