ದಾವಣಗೆರೆ: ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಇತರ ಮಕ್ಕಳೊಂದಿಗೆ ಸ್ನೇಹ ಸಂಪಾದಿಸುವುದು ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂತೋಷವಾಗಿರಲು ಸಾಧ್ಯವಾಗಲಿದೆ ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಜೆ.ಎಚ್. ಪಟೇಲ್ ನಗರದಲ್ಲಿನ ಜಿಲ್ಲಾ ಬಾಲಭವನದಲ್ಲಿ 6 ರಿಂದ 16 ವರ್ಷದ ಮಕ್ಕಳಿಗಾಗಿ ಸೋಮವಾರ ಆರಂಭವಾದ ಬೇಸಿಗೆ ಶಿಬಿರವನ್ನು, ಮಕ್ಕಳಿಗೆ ಫ್ರೆಂಡ್‌ಶಿಪ್ ಟ್ಯಾಗ್ ಕಟ್ಟುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಚಿಣ್ಣರು ರಜೆಯ ದಿನಗಳನ್ನು ಸ್ನೇಹಿತರೊಂದಿಗೆ ಕಳೆಯದೆ ಮೊಬೈಲ್‌ನಲ್ಲಿ ಗೇಮ್ ಆಡುವುದರಲ್ಲಿ ನಿರತರಾಗುತ್ತಿದ್ದಾರೆ.
ಇದರಿಂದ ಮಕ್ಕಳಿಗೆ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅವಕಾಶ ದೊರೆಯುತ್ತಿಲ್ಲ. ಹೀಗಾಗಿ, ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಬೆರೆಯಬೇಕು, ಸವಿನೆನಪುಗಳೊಂದಿಗೆ ಶಾಲೆಗೆ ಮರಳಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ
ಕದಳಿ ಮಹಿಳಾ ವೇದಿಕೆಯ ಯಶಾ ದಿನೇಶ್ ಮಾತನಾಡಿ, ಎಲ್ಲ ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದು, ಅದನ್ನು ಹೊರತರಲು ಹಾಗೂ ಪೋಷಿಸಿ ಬೆಳೆಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಯೋಗ, ಸಮೂಹ ನೃತ್ಯ ಕಲಿಸಲಾಗುತ್ತಿದೆ.
ಕರಕುಶಲ ವಸ್ತುಗಳ ತಯಾರಿಕೆ
ಸಮೂಹ ಗಾಯನ, ಕರಕುಶಲ ವಸ್ತುಗಳ ತಯಾರಿಕೆ, ಗ್ರಾಮೀಣ ಕ್ರೀಡೆಗಳು, ಕಥೆ ಹೇಳುವುದು, ಕಥೆ ಬರೆಯುವುದು ಅಲ್ಲದೆ ನಗೆಹಬ್ಬಗಳಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ವಿಜ್ಞಾನ ಪರಿಷತ್ ಸಹಯೋಗ ನೀಡಿದೆ ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ರಾಮಚಂದ್ರ ಶೆಟ್ಟರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಸನ್ನ ಕುಮಾರ್, ಸಂಯೋಜಕಿ ಮಾಲತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಎನ್.ಬಿ. ಲೀಲಾ ಹಾಗೂ ಡಿ.ಕೆ. ಲಕ್ಷ್ಮೀ ಇದ್ದರು.
ಬೇಸಿಗೆ ಶಿಬಿರದಲ್ಲಿ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರದ ಮಕ್ಕಳು, ಶಾಮನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 100 ಮಕ್ಕಳು ಭಾಗವಹಿಸಿದ್ದರು.