ಜಿಲ್ಲೆ

ಅಂಬೇಡ್ಕರ್ ಹೋರಾಟ ಫಲವಾಗಿ ಸಾಮಾಜಿಕ ಸುಧಾರಣೆ

ಸರಗೂರು: ಭಾರತದ ಸಾಮಾಜಿಕ ಅಸಮಾನತೆ ವಿರೋಧಿಸಿ, ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ನಡೆಸಿದ ನಿರಂತರ ಹೋರಾಟದ ಫಲವಾಗಿ ಭಾರತದಲ್ಲಿ ನೀತಿಗಳು, ಸಾಮಾಜಿಕ ಸುಧಾರಣೆಗಳು ರೂಪುಗೊಳ್ಳಲು ಸಹಕಾರಿಯಾಯಿತು ಎಂದು ಅಕ್ಕ ಐಎಎಸ್ ಅಕಾಡೆಮಿ ತರಬೇತುದಾರ ಡಾ.ಶಿವಕುಮಾರ್ ಹೇಳಿದರು.

ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಂಕೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು. ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ್ದಾರೆ ಎಂದು ಹೇಳಿದರು. ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ ಅವರ ಕೊಡುಗೆ ಭಾರತ ಜನತೆಯ ಜೀವನಾಡಿ ಇದ್ದಂತೆ. ಅವರ ಬೃಹತ್ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಸುಗಮವಾಗಿದೆ ಎಂದರು.

ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರೂ ಆಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂತರಸಂತೆ ಬುದ್ಧ ವಿಹಾರದ ಗೌತಮಿ ಬಂತೇಜಿ ಆಶೀರ್ವಚನ ನೀಡಿದರು.

ಮನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಂಕೆ ರಮೇಶ್ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಿದರು.

ಕಾರ್ಯಕ್ರಮದ ನಂತರ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ಮಂಗಳವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಗುಡಿಗೌಡ ನಾಗರಾಜಪ್ಪ, ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್, ಸದಸ್ಯ ಸೋಮಶೇಖರ್, ಕರಿಸ್ವಾಮಿ, ಯಜಮಾನ ಬಸವರಾಜು, ದೇವರಾಜು, ಮಂಜು, ನಿಂಗರಾಜು, ಬಿಲ್ಲಯ್ಯ, ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್, ಲಿಂಗಾಯತ ಸಮಾಜದ ಮುಖಂಡ ಹಾಗೂ ಗ್ರಾಪಂ ಸದಸ್ಯ ಪುಟ್ಟು, ಭೀಮಾ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ, ಮರಿಲಿಂಗಯ್ಯ, ಪುಟ್ಟಮ್ಮ, ಜಯಮ್ಮ, ಈಶ್ವರ್, ಶಿವರಾಜು, ದೇವರಾಜು, ದಯಾನಂದ, ಸಂಜು, ದಸಂಸ ಮುಖಂಡ ಲಂಕೆ ಲಕ್ಷ್ಮಣ್, ಶ್ರೀನಿವಾಸ, ಚಿನ್ನಸ್ವಾಮಿ, ಶಿವಮೂರ್ತಿ, ಮಹದೇವಸ್ವಾಮಿ, ಚಿನ್ನು ಇತರರು ಇದ್ದರು.