ಗುರುಪುರ: ಶಿಕ್ಷಕರ ಸೇವೆ ಪವಿತ್ರವಾದದ್ದು. ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ಅಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಅಭಿಪ್ರಾಯಪಟ್ಟರು.
ಮಂಗಳೂರು ದಕ್ಷಿಣ ವಲಯ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘ ವತಿಯಿಂದ ಇತ್ತೀಚಿಗೆ ಕಿನ್ನಿಕಂಬಳ ರೋಸಾ ಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕಿ ಲಿಲ್ಲಿ ಡಿಸೋಜ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನಂದನಾ ಭಾಷಣಗೈದ ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ, ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದೊಂದಿಗೆ ಮಾನವೀಯ ಶಿಕ್ಷಣ ಬಹಳ ಮುಖ್ಯ ಎಂದರು.
ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಸ್, ಸಂಘದ ಉಪಾಧ್ಯಕ್ಷ ಗುರುಮೂರ್ತಿ ಪಿ., ಕೋಶಾಧಿಕಾರಿ ಪ್ರೇಮನಾಥ ಶೆಟ್ಟಿ ಎಡಪದವು, ಶಾಲಾ ಸಂಚಾಲಕ ರೋಸ್ ಲಿಟ, ಮುಖ್ಯ ಶಿಕ್ಷಕಿ ವೀಣಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶೀಲಾವತಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಲೂಸಿ ಮರಿಸಾ ಮೊದಲಾದವರಿದ್ದರು.
ಶಿಕ್ಷಕರಾದ ಸಿಲ್ವಿಯ, ಐಡಾ ಪಿರೇರಾ, ಸಬೀನಾ ಕ್ರಸ್ತಾ, ಅಂಜಲಿನ್, ಆಶ್ರಿತಾ, ಪ್ರವೀಣ್ ಕುಟಿನೊ ಮತ್ತಿತರರು ಸಹಕರಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಲೆನ್ಸಿ ಸಿಕ್ವೇರಾ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಗುರುಮೂರ್ತಿ ಪಿ. ವಂದಿಸಿದರು.