ಜಿಲ್ಲೆ

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿ

Belagavi

ಬೆಳಗಾವಿ: ಇಂಜಿನಿಯರಿಂಗ್ ಪದವೀಧರರು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು. ಜಾಗತಿಕ ತಾಪಮಾನ, ಅರಣ್ಯ ನಾಶ ಮತ್ತಿತರ ಸಮಸ್ಯೆಗಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ರಕ್ಷಣಾ ಇಲಾಖೆ ಮಾಜಿ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ.ಆತ್ರೆ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಜರುಗಿದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ತಂತ್ರಜ್ಞಾನದಿಂದ ನಮಗೆ ಎಷ್ಟು ಅನುಕೂಲವಾಗಿದೆಯೋ, ಅಷ್ಟೇ ಅಪಾಯವೂ ಉಂಟಾಗಿದೆ. ಹೀಗಾಗಿ ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಎಂದರು.

ಜಾಗತಿಕವಾಗಿ ಹೆಚ್ಚುತ್ತಿರುವ ಆಹಾರ ಬೇಡಿಕೆ ನೀಗಿಸಲು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಬೇಕು. ವಿವಿಧ ಕಾಯಿಲೆಗಳ ಹರಡುವಿಕೆ ನಿಯಂತ್ರಣಕ್ಕಾಗಿ ಜೀವವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆಗಳು ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಭೋಪಾಲ್‌ನಲ್ಲಿ ನಡೆದ ಅನಿಲ ದುರಂತದಂತಹ ಘಟನೆಗಳು ಮರುಕಳಿಸದಂತೆ ಇಂಜಿನಿಯರ್‌ಗಳು ಎಚ್ಚರ ವಹಿಸಬೇಕು. ಭಾರತದಲ್ಲಿ ನೈರ್ಮಲ್ಯ ಕಾಪಾಡುವುದೇ ಸವಾಲಿನ ವಿಷಯ. ಇದಕ್ಕಾಗಿ ಹೆಚ್ಚಿನ ಹೂಡಿಕೆ ಮಾಡುವ ಜತೆಗೆ, ನವೀನ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಪ್ರೊ.ಅಶುತೋಷ್ ಶರ್ಮಾ ಮಾತನಾಡಿ, ಭವಿಷ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸತನ, ಅನ್ವೇಷಣೆಗೆ ಒತ್ತು ನೀಡಬೇಕು ಎಂದರು. ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿಟಿಯು ಮುಂಚೂಣಿಯಲ್ಲಿದೆ.

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಸಂಶೋಧನೆಗಳನ್ನು ಕೈಗೊಳ್ಳುವುದೇ ನಮ್ಮ ಗುರಿ ಎಂದರು. ಕುಲಸಚಿವ ಪ್ರೊ.ಎ.ಎಸ್.ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ, ಡೀನ್ ಪ್ರೊ.ಎನ್.ವಿ.ಆರ್.ನಾಯ್ಡು ಇತರರಿದ್ದರು. ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು, ಕಾರ್ಯಕ್ರಮ ಆಯೋಜಿಸಲಾಗಿತ್ತು.