ಹಾಸನ: ಆಧುನಿಕ ಭಾರತದಲ್ಲಿ ಯುವಪೀಳಿಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಎಸ್‌ಡಿಎಂ ಮಹಾವಿದ್ಯಾಲಯದ ಆಯುರ್ವೇದ ಮತ್ತು ಯೋಗ ತಜ್ಞ ಡಾ.ಗುರುಬಸವರಾಜ್ ಯಲಗಚ್ಚಿ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ವೇದಿಕೆ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆ ಮತ್ತು ವಾಣಿಜ್ಯಶಾಸ್ತ್ರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದಲ್ಲಿ ಭಾರತದಲ್ಲಿ ಯುವಪೀಳಿಗೆ ಹೆಚ್ಚಿನ ಪ್ರಮಾಣದಲ್ಲಿದ್ದು, ಸಾಕಷ್ಟು ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ, ಸಾಮಾಜಿಕ ಜಾಲತಾಣಕ್ಕೆ, ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಗರ್ಭದ ಸಮಸ್ಯೆ, ಥೈರಾಯ್ಡ, ಕ್ಯಾನ್ಸರ್, ಬಂಜೆತನದಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.
ಟೂತ್‌ಪೇಸ್ಟ್‌ನಿಂದ ಹಿಡಿದು ರಾತ್ರಿ ಮಲಗುವರೆಗೂ ನಾವು ಬಳಸುತ್ತಿರುವ ವಸ್ತುಗಳು ಮಾರಕವಾಗಿವೆ. ಹೆಣ್ಣು ಮಕ್ಕಳು ಕೃತಕ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುವ ಮೂಲಕ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಆಹಾರ ಪದ್ಧತಿ ಸರಿ ಇಲ್ಲದ ಕಾರಣ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬರೂ ಆರೋಗ್ಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಚಾಲಕಿ ಶಿಲ್ಪಾ ನೇತೃತ್ವದಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಜಿ.ರಾಜಶೇಖರ್ ಅವರ ವಾಣಿಜ್ಯಶಾಸ್ತ್ರ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್.ವಿ.ಪುರುಷೋತ್ತಮ್, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಎಚ್.ರಾಮೇಗೌಡ, ಸಿಡಿಸಿ ಸದಸ್ಯ ಎಸ್.ಎಸ್.ಪಾಷ, ಪರಮೇಶ್, ಸಮೀರ್ ಅಹಮ್ಮದ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಯೋಗೇಶ್, ಎನ್‌ಸಿಸಿ ಸಂಚಾಲಕ ಡಾ.ಗಿರೀಶ್, ಯುವ ರೆಡ್‌ಕ್ರಾಸ್ ಮಹಿಳಾ ಘಟಕ ಸಂಚಾಲಕ ಡಾ.ವೆಂಕಟೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಜಿ.ಎಂ.ಲತಾ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ.ಯೋಗೇಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಯೋಗೇಶ್, ಕಾಲೇಜಿನ ವ್ಯವಸ್ಥಾಪಕ ಹರ್ಷ ಇತರರು ಇದ್ದರು.