ಜಿಲ್ಲೆ

ಸಾಮಾಜಿಕ ಜಾಲತಾಣದ ಅಸ್ತ್ರ

reportermys

ಮಡಿಕೇರಿ:

ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪ್ರಚಾರದ ಕಾವು ಬಿರುಸಾಗಿದೆ. ಉಳಿದಿರುವ ಕಡಿಮೆ ಅವಧಿಯಲ್ಲಿ ಮತದಾರರ ಮನವೊಲಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಬಗೆ ಬಗೆಯ ಕಸರತ್ತು ನಡೆಸುತ್ತಿವೆ. ವಿವಿಧ ಪಕ್ಷಗಳ ಕಾರ್ಯಕರ್ತರು ಈತನಕದ ಚುನಾವಣೆಗಳನ್ನು ಕ್ರೀಡಾಸ್ಫೂರ್ತಿಯಿಂದ ಎದುರಿಸುತ್ತಿದ್ದರು. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳ ಬಳಕೆ ಗರಿಷ್ಟ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಆರೋಪ ಪ್ರತ್ಯಾರೋಪಗಳಿಗೆ ಹೊಸದೊಂದು ವೇದಿಕೆ ಸಿಕ್ಕಂತಾಗಿದೆ. ಚುನಾವಣಾ ಆಯೋಗದ ತೀವ್ರ ನಿಗಾ ಮಧ್ಯೆಯೂ ಬಳಕೆಯಾಗುತ್ತಿರುವ ಭಾಷೆ ಸಭ್ಯತೆಯ ಚೌಕಟ್ಟು ಮೀರುತ್ತಿರುವಂತಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಯಾವುದೇ ರೀತಿಯ ಉಲ್ಲಂಘನೆಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟ ಎಚ್ಚರಿಕೆ ನೀಡಿತ್ತು. ಚುನಾವಣೆ ಘೋಷಣೆಯಾದ ಆರಂಭದ ದಿನಗಳಲ್ಲಿ ಈ ಎಚ್ಚರಿಕೆಯ ಸಂದೇಶ ಪಾಲನೆ ಕೂಡ ಆಗುತ್ತಿತ್ತು. ಕೊಡಗಿನಲ್ಲಿ ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರಣ ಕೇಳಿ ನೊಟೀಸ್ ಕೂಡ ಜಾರಿಯಾಗಿತ್ತು. ಆದರೆ ಈಗ ಸಾಮಾಜಿಕ ಜಾಲತಾಣಗಳ ಮೇಲೆ ಯಾವುದೇ ಕಡಿವಾಣ ಇರುವಂತೆ ಕಂಡುಬರುತ್ತಿಲ್ಲ. ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿರುವ ಸಂದೇಶಗಳೇ ಇದಕ್ಕೆ ಸಾಕ್ಷಿ.

ಪ್ರಸ್ತುತ ದಿನಗಳಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮದಷ್ಟೇ ಪ್ರಭಾವಶಾಲಿಯಾಗಿ ಸಾಮಾಜಿಕ ಜಾಲತಾಣಗಳೂ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈಗ ತಾಂತ್ರಿಕತೆ ಸಾಕಷ್ಟು ಮುಂದುವರಿದಿದ್ದು, ಎಲ್ಲರಿಗೂ ಆಧುನಿಕ ತಂತ್ರಜ್ಞಾನ ಕೈಗೆಟುಕುತ್ತಿರುವುದರಿಂದ ವಾಟ್ಸಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಗೂಗಲ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಸಾಮಾನ್ಯ ಎಂಬಂತಾಗಿದೆ. ಹಾಗಾಗಿಯೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಈ ಮಾಧ್ಯಮಗಳ ಮೂಲಕವೇ ಮತದಾರರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಚುನಾವಣಾ ಪ್ರಚಾರ ಸೇರಿದಂತೆ ನೀತಿ ಸಂಹಿತೆಗೆ ಸಂಬಂಧಿಸಿದ ಅನೇಕ ವಿಷಯಗಳು ಈಗ ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗುತ್ತವೆ. ಇದರಿಂದಾಗಿ ಬಳಕೆದಾರರ ಸಂಖ್ಯೆ ಹೆಚ್ಚಿರುವ ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಥವಾ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವ ವ್ಯಕ್ತಿ ಇಲ್ಲವೇ ವ್ಯಕ್ತಿಗಳ ಗುಂಪುಗಳು ಬಳಸುವ ವಿಷಯ, ಭಾಷೆ, ವೈಯಕ್ತಿಕ ಪೋಸ್ಟ್ ಇತ್ಯಾದಿಗಳ ಮೇಲೆ ನಿಗಾ ಇಡಲು ತಂಡಗಳನ್ನೂ ರಚಿಸಲಾಗಿದೆ. ಇಂತಹ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರ, ಅಭ್ಯರ್ಥಿಗಳ ಸಾಧನೆಯ ವಿವರ, ಪಕ್ಷ ಮತ್ತು ಅಭ್ಯರ್ಥಿಗಳ ಚಿಂತನೆ, ಯೋಜನೆ, ಯೋಚನೆಗಳು ಯಥೇಚ್ಛವಾಗಿ ಕಂಡುಬರುತ್ತಿದೆ. ಇನ್ನೂ ಮುಂದೆ ಹೋಗಿ ವ್ಯಯಕ್ತಿಕ ಆರೋಪ, ಪ್ರತ್ಯಾರೋಪ, ತೇಜೋವಧೆಗಳಿಗೂ ಸಾಮಾಜಿಕ ಮಾಧ್ಯಮಗಳು ವೇದಿಕೆ ಆಗುತ್ತಿದೆ. ಫೇಸ್‌ಬುಕ್, ವಾಟ್ಸಪ್, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಪ್ರಮುಖ ನಾಯಕರು ತಮ್ಮ ಖಾತೆಗಳನ್ನು ತೆರೆದು ಪ್ರಚಾರ ಕಾರ್ಯದ ವಿವರ, ಮತ ಯಾಚನೆಯ ಫೋಟೋಗಳು, ರ‌್ಯಾಲಿ, ಜಾಥಾಗಳ ವೀಡಿಯೋಗಳನ್ನು ಹರಿಯಬಿಡುತ್ತಿದ್ದಾರೆ.

ಈ ಚುನಾವಣೆಯಲ್ಲಿ ವಾಟ್ಸಪ್ ಗ್ರೂಪ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆ. ಪ್ರತಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ನಾಯಕರು ಹೀಗೆ ಎಲ್ಲರೂ ಗ್ರೂಪ್‌ಗಳನ್ನು ಕ್ರಿಯೆಟ್ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷವೊಂದು ಮತದಾರರ ಪಟ್ಟಿಯ ಒಂದೊಂದು ಪುಟಕ್ಕೂ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದೆ. ಬೂತ್, ಗ್ರಾಮ, ಪಟ್ಟಣ ಮಟ್ಟದ ಗ್ರೂಪ್‌ಗಳು ಕೂಡ ಸಕ್ರಿಯವಾಗಿದೆ. ಮುಖ್ಯ ವಾಹಿನಿಯ ಮಾಧ್ಯಮಗಳ ನಿರ್ವಹಣೆಗೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ವಿಶೇಷ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದು, ಮಾಧ್ಯಮಗಳ ಕೆಲಸವನ್ನು ಹಗುರ ಮಾಡಿಕೊಡಲಾಗಿದೆ.

ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಯುವಜನತೆಯನ್ನು ಸುಲಭವಾಗಿ ತಲುಪಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಈಗ ಬದಲಾದ ಕಾಲಮಾನದಲ್ಲಿ ಸಾಮಾನ್ಯವಾಗಿ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್‌ಗಳು ಇರುವುದರಿಂದ ಈ ನವ ಮಾಧ್ಯಮ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇವುಗಳನ್ನು ನಿರ್ವಹಿಸಲು ರಾಜಕೀಯ ಪಕ್ಷಗಳು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಸಕ್ತಿ ಇರುವ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಯುವಕರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ವಿಭಾಗ ಎನ್ನುವ ಪ್ರತ್ಯೇಕ ಘಟಕವನ್ನು ತೆರೆದು ಅದಕ್ಕೊಬ್ಬ ಮುಖ್ಯಸ್ಥರನ್ನೂ ರಾಜಕೀಯ ಪಕ್ಷಗಳು ನೇಮಿಸಿಕೊಂಡಿವೆ.

ಅಭ್ಯರ್ಥಿಗಳನ್ನು ತೇಜೋವಧೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಈಗಿನ ಹೊಸ ಬೆಳವಣಿಗೆಯಾಗಿದೆ. ಅವರಿಗೆ ಪ್ರತಿಕೂಲ ಆಗಬಹುದಾದ ಅವರದ್ದಲ್ಲದ ಹೇಳಿಕೆಗಳನ್ನು ಪತ್ರಿಕೆ ಅಥವಾ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಅವರೇ ನೀಡಿರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಗೊಂದಲ ಮೂಡಿಸಲಾಗುತ್ತಿದೆ. ಇದಕ್ಕಾಗಿ ವಾಟ್ಸಪ್ ಗ್ರೂಪ್‌ಗಳನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಈಗ ಒಂದು ಗ್ರೂಪ್‌ನಲ್ಲಿ ೧೦೨೪ ಮಂದಿ ಸೇರಿಸಲು ಅವಕಾಶ ಇದ್ದು, ಒಮ್ಮೆ ಇಂತಹ ಸಂದೇಶ ಹಾಕಿದರೆ ಗ್ರೂಪ್‌ನಿಂದ ಗ್ರೂಪ್‌ಗೆ ಶರವೇಗದಲ್ಲಿ ಹರಡಿ ಸಾವಿರಾರು ಜನರನ್ನು ಕೆಲವೇ ನಿಮಿಷಗಳಲ್ಲಿ ತಲುಪಿಬಿಡುತ್ತದೆ. ಇದಕ್ಕೆ ಕಾರಣಕ್ಕೆ ಈ ಬಾರಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಂದು ತಂಡವನ್ನೂ ರಚಿಸಲಾಗಿದೆ. ಫೇಸ್‌ಬುಕ್ ಪೇಜ್ ಮತ್ತು ವಾಟ್ಸಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಆ ಗ್ರೂಪ್‌ನ ಅಡ್ಮಿನ್‌ನನ್ನೇ ನೇರವಾಗಿ ಹೊಣೆಗಾರನನ್ನಾಗಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈ ತನಕ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರಮುಖ ರಾಜಕೀಯ ಪಕ್ಷಗಳಿಗೆ ನೊಟೀಸ್ ಕೊಡಲಾಗಿದೆ. ನಂತರದ ದಿನಗಳಲ್ಲಿ ಇಂತಹ ಘಟನೆಗಳು ಕಡಿಮೆ ಆಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಚುನಾವನಾ ಆಯೋಗ ತೀವ್ರ ನಿಗಾ ಇಟ್ಟಿದೆ.
ಡಾ. ಬಿ.ಸಿ. ಸತೀಶ, ಕೊಡಗು ಜಿಲ್ಲಾಧಿಕಾರಿ