ಹೊಳಲ್ಕೆರೆ: ಕ್ಷೇತ್ರದಲ್ಲಿ ಯಾವುದೇ ಜಾತಿ ತಾರತಮ್ಯ ಮಾಡದೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ತೃಪ್ತಿ ಇದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಚಿಕ್ಕಜಾಜೂರು ಕಾವಲ್ ಗ್ರಾಮದಲ್ಲಿ ಒಂದು ಕೋಟಿ 35 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಈಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬಂದು 78 ವರ್ಷಗಳು ಉರುಳಿವೆ. ತಾಲೂಕಿಗೆ ಹಲವಾರು ಶಾಸಕರು ಬಂದು ಹೋಗಿದ್ದಾರೆ. ಆದರೆ ರಸ್ತೆಗಳು ಮಾತ್ರ ಆಗಿಲ್ಲ ಎಂದರು.
ತಾಲೂಕಿನ 493 ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದು, ಹೆಣ್ಣು ಮಕ್ಕಳು ಬೀದಿಗೆ ಬಂದು ನೀರು ಹಿಡಿಯಬಾರದೆಂದು ಟ್ಯಾಂಕ್ ಕಟ್ಟಿಸಲಾಗಿದೆ. ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ಹೈಟೆಕ್ ರಸ್ತೆ ಮಾಡಲಾಗಿದೆ. ಮಸೀದಿ ನಿರ್ಮಾಣಕ್ಕೆ 50 ಲಕ್ಷ ರೂ.ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಕೊಲ್ಲಾಪುರದಮ್ಮ ದೇವಸ್ಥಾನದ ಮುಂದಿನ ಗೋಕಟ್ಟೆ ನಿರ್ಮಾಣಕ್ಕೆ ಒಂದು ಕೋಟಿ ರೂ.ಗಳನ್ನು ಕೇಳಿದ್ದು, ಒಂದೂವರೆ ಕೋಟಿ ರೂ. ನೀಡಲಾಗಿದೆ. ಇನ್ನು ನಾಲ್ಕು ವರ್ಷಗಳ ಕಾಲ ಅಧಿಕಾರಾವಧಿಯಲ್ಲಿ ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಲಿದ್ದೇನೆ ಎಂದರು.
ಚಿಕ್ಕಜಾಜೂರು ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ಒಂದು ಕೋಟಿ 37 ಲಕ್ಷ ರೂ. ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ 39 ಲಕ್ಷ ರೂ. ಹಾಗೂ ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಹೊಸ ಜಿನುಗು ಕೆರೆ ನಿರ್ಮಾಣಕ್ಕೆ 92 ಲಕ್ಷ ರೂ. ಚಿಕ್ಕಜಾಜೂರು ಗ್ರಾಮದ ಜಿನುಗು ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದರು.
ಗ್ರಾಪಂ ಅಧ್ಯಕ್ಷೆ ಅಂಜಲಿ ಮೋಹನ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಜಮೀರ್, ಶ್ರೀಕಾಂತ್, ಲಕ್ಷ್ಮೀ, ಕರೀಂಭಾಯ್, ಡಿ.ಸಿ.ಮೋಹನ್, ಕೃಷ್ಣಮೂರ್ತಿ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಾಗರಾಜ್ ಇತರರಿದ್ದರು.