ಕೊಟ್ಟೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರಕ್ಕೆ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ಮೈದೂರು ಶಿವಣ್ಣ, ಗೌರವ ಅಧ್ಯಕ್ಷ ದೊಡ್ಡರಾಮಣ್ಣ, ಕೊಟ್ಟೂರೇಶ್ವರ ದೇವಾಲಯದ ಪ್ರಧಾನ ಧರ್ಮಕರ್ತ ಶೇಖರಯ್ಯ, ಭಾರತೀ ಸುಧಾಕರ ಪಾಟೀಲ್, ಮರಿಸ್ವಾಮಿ, ವೆಂಕಟೇಶ, ಬರಮಪ್ಪ, ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ಎ.ಸಿ. ಚನ್ನಬಸಪ್ಪ ಮತ್ತಿತರರಿದ್ದರು. 
ಜಿಲ್ಲೆ

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿ

ಕೊಟ್ಟೂರು: ರಾಜ್ಯಾದ್ಯಂತ ಮದ್ಯವರ್ಜನ ಶಿಬಿರ ಏರ್ಪಡಿಸಿ ಮಧ್ಯವೆಸನಿಗಳಿಗೆ ಉತ್ತಮ ಮಾರ್ಗ ಕಂಡುಕೊಳ್ಳುವಲ್ಲಿ ಸಹಾಯ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕಾರ್ಯ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಡೋಣೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ 1,841ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮದ್ಯವ್ಯಸನದಿಂದ ಮುಕ್ತಿ ಪಡೆದ ಬಹುತೇಕರು ಉತ್ತಮ ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವ ಮತ್ತು ಸಂಸಾರಕ್ಕೂ ಮಾರಕವೆನಿಸಿದ ಮಧ್ಯವೆಸನಿಗಳಿಗೆ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದರು.

ಕೊಪ್ಪಳ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ನಾಗೇಶ ಮಾತನಾಡಿ, ಈ ರೀತಿಯ ಶಿಬಿರದಿಂದ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಶಿಬಿರಾರ್ಥಿಗಳು ಕುಡಿತ ಬಿಟ್ಟು ಕುಟುಂಬವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ.

ಕುಡಿತ ಬಿಟ್ಟ ಶಿಬಿರಾರ್ಥಿಗಳಿಗೆ ಅವರವರ ವೃತ್ತಿಗೆ ಅನುಗುಣವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆರ್ಥಿಕ ನೆರವು ನೀಡಿದ್ದೇವೆ. ಇದನ್ನು ಸದುಪಯೋಗ ಪಡಿಸಿಕೊಂಡ ಅನೇಕರು ಉತ್ತಮ ನಾಗರಿಕರಾಗಿ ಪರಿವರ್ತನೆಯಾಗಿದ್ದಾರೆ ಎಂದರು.

ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಮಾತನಾಡಿ, ಮದ್ಯವರ್ಜನ ಶಿಬಿರಕ್ಕೆ ಸ್ಥಳೀಯ ಗಣ್ಯರ ಸಹಕಾರ ಮತ್ತು ಉತ್ತೇಜನ ಅಗತ್ಯವಾಗಿದೆ ಎಂದರು.