ವಿಸ್ತರಿಸಿದರೂ ಮುಗಿದಿಲ್ಲ ಸಾಮಾಜಿಕ ಗಣತಿ
ಕರ್ತವ್ಯದಿಂದ ಶಿಕ್ಷಕರಿಗೆ ವಿನಾಯಿತಿ
ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ದಿನ ಮುಗಿದರೂ ಸಹ ಜಿಲ್ಲೆಯಲ್ಲಿ ಗಣತಿ ಕಾರ್ಯ ಪೂರ್ಣಗೊಂಡಿಲ್ಲ. ಮತ್ತೆ ಅ.25ರ ವರೆಗೆ ಅವಕಾಶ ನೀಡಿದ್ದು, ಸಮೀಕ್ಷೆಯ ಪರೀಕ್ಷೆ ಮುಂದುವರಿದಿದೆ.
ಸೆ.22ರಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದ ಸಮೀಕ್ಷೆ ಕಾರ್ಯ ಅ.8ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ರಾಜ್ಯದ ಯಾವ ಭಾಗದಲ್ಲಿಯೂ ಸಮರ್ಪಕವಾಗಿ ಹಾಗೂ ಕಾರ್ಯಯೋಜನೆಯಂತೆ ಗಣತಿ ನಡೆದಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತೆ 10 ದಿನ ವಿಸ್ತಿರಿಸಿ ಅ.18ರ ವರೆಗೆ ಸಮೀಕ್ಷೆ ನಡೆಸಲು ಕಾಲಾವಕಾಶ ನೀಡಿದ್ದರು.
ಶಿಕ್ಷಕರಿಗೆ ಬಿಡುಗಡೆ
ದಸರಾ ರಜಾ ಸಂದರ್ಭದಲ್ಲಿಯೇ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದರಿಂದ ಶಾಲಾ ರಜಾ ಅವಧಿಯಲ್ಲೂ ಸಹ ಶಿಕ್ಷಕರು ಹಾಗೂ ಇನ್ನಿತರರು ಇಲಾಖೆ ನೌಕರರು ಗಣತಿ ಕರ್ತವ್ಯದಲ್ಲಿ ತೊಡಗಿದ್ದರು. ಸಮೀಕ್ಷೆ ವಿಸ್ತರಿಸಿದ್ದರಿಂದ ಸರ್ಕಾರಿ ಶಾಲೆಗಳಿಗೂ ಸಹ ಹೆಚ್ಚುವರಿ 10 ದಿನ ರಜೆ ಘೋಷಿಸಲಾಗಿತ್ತು. ಅ.18 ಅಂತಿಮ ದಿನವಾಗಿದ್ದರೂ ಸಹ ಜಿಲ್ಲೆಯಲ್ಲಿ ಗಣತಿ ಪೂರ್ಣಗೊಳ್ಳದ್ದರಿಂದ ಭಾನುವಾರ (ಅ.19)ವೂ ಸಹ ಸಂಜೆಯವರೆಗೆ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದರು. ಇದೀಗ ದೀಪಾವಳಿ ರಜೆಯ ಬಳಿಕ ಸರ್ಕಾರಿ ಶಾಲೆ ಪುನರಾರಂಭ ಮಾಡಬೇಕಿದ್ದು, ಗಣತಿ ಬಾಕಿ ಇದ್ದರೂ ಆ ಕಾರ್ಯದಿಂದ ಶಿಕ್ಷಕರನ್ನು ಬಿಡುಗಡೆ ಮಾಡಲಾಗಿದೆ.
ಸಮೀಕ್ಷೆ ದಾರರಿಗೆ ಕಿರಿಕಿರಿ
ಪಡಿತರ ಚೀಟಿ ಆಧಾರದಲ್ಲಿ ಸಮೀಕ್ಷೆ ಮಾಡಿದ ಮನೆಗಳ ಸಂಖ್ಯೆ, ಆಧಾರ್ ಆಧಾರಿತ ಗಣತಿ ಮನೆಗಳ ಸಂಖ್ಯೆ, ಮಾಹಿತಿ ನೀಡದವರ ಸಂಖ್ಯೆ, ಸಮೀಕ್ಷೆಗೆ ಒಳಪಡದವರ ಸಂಖ್ಯೆ, ಮೃತರಾದವರ ಮಾಹಿತಿ, ಹೊರದೇಶದಲ್ಲಿ ವಾಸಿಸುವರ ಸಂಖ್ಯೆ, ಚಿಕ್ಕ ಮಕ್ಕಳ ಸಂಖ್ಯೆ ಹೀಗೆ ಹಲವಾರು ಅಂಕಿ-ಅಂಶಗಳನ್ನು ಪ್ರತ್ಯೇಕ ದೃಢೀಕರಣ ನಮೂನೆಗಳಲ್ಲಿ ನೀಡುವಂತೆ ಸರ್ಕಾರ ಸೂಚಿಸಿದೆ. ಇದು ಗಣತಿದಾರರಿಗೆ ಕಿರಿಕಿರಿ ಉಂಟಾಗಿದೆ. ಸಮೀಕ್ಷೆದಾರರಿಗೆ ತರಬೇತಿಯ ಅವಧಿಯಲ್ಲಿ ಅಥವಾ ಸಮೀಕ್ಷೆ ಆರಂಭದ ಸಂದರ್ಭದಲ್ಲಿ ನಮಗೆ ಸ್ವಯಂ ದೃಢೀಕರಣ ನಮೂನೆ ಹೊರತುಪಡಿಸಿ ಬೇರಾವುದೇ ನಮೂನೆ ನೀಡಿಲ್ಲ. ಗಣತಿಗೂ ಮೊದಲೇ ಈ ವಿಚಾರ ತಿಳಿಸಿದ್ದರೆ ಸಮೀೆ ಸಂದರ್ಭದಲ್ಲೇ ಪ್ರತ್ಯೇಕವಾಗಿ ಅಂಕಿ-ಅಂಶ ನಮೂದಿಸಿಕೊಳ್ಳುತ್ತಿದ್ದೆವು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾವಾರು ಮಾಹಿತಿ (ಅ.18ರ ವರೆಗೆ)
ತಾಲೂಕು ಕುಟುಂಬ ಬ್ಲಾಕ್ ಪೂರ್ಣಗೊಂಡ ಮನೆ ಶೇಕಡ
ಬೈಂದೂರು 26,623 246 27,535 93.49
ಹೆಬ್ರಿ 13,422 121 11,783 97.67
ಕುಂದಾಪುರ 66,678 621 56,611 93.59
ಬ್ರಹ್ಮಾವರ 51,775 465 41,256 94.36
ಕಾರ್ಕಳ 58,634 531 42,842 91.12
ಕಾಪು 46,286 403 31,980 91.86
ಉಡುಪಿ 98,675 844 55,046 80.91
ಒಟ್ಟು 3,62,093 3,231 2,67,053 90.55
ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದ್ದು, ಕೇವಲ 3ರಿಂದ 4 ಸಾವಿರ ಜನರ ಗಣತಿಯಷ್ಟೇ ಬಾಕಿಯಿದೆ. ಭಾನುವಾರ (ಅ.19) ಸಂಜೆಯವರೆಗೂ ಶಿಕ್ಷಕರು ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಶಾಲೆ ಪುನರಾರಂಭ ಮಾಡಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಬಿಟ್ಟುಹೋದ ಹಾಗೂ ಬಾಕಿ ಇರುವ ಕುಟುಂಬಗಳ ಸರ್ವೇ ಪೂರ್ಣಗೊಳಿಸಲು ಶಿಕ್ಷಕೇತರ ಸರ್ಕಾರಿ ನೌಕರರನ್ನು ಬಳಸಿಕೊಳ್ಳಲಾಗುವುದು. ಅ.25ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿದೆ.
| ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.